ಮಂಗಳೂರು: ಶಿಕ್ಷಣ ಎನ್ನುವುದು ಜ್ಞಾನ, ಮನೋಭಾವ ಮತ್ತು ಕೌಶಲಗಳ ಸಂಗಮವಾಗಿದೆ. ಅನುಭವ, ಶಿಕ್ಷಣ ಮತ್ತು ತರಬೇತಿಯಿಂದ ಜ್ಞಾನ, ಮನೋಭಾವ ಮತ್ತು ಕೌಶಲಗಳು ಸಿದ್ಧಿಸುತ್ತವೆ. ಇವುಗಳ ಸುತ್ತ ತಾಂತ್ರಿಕ ಶಿಕ್ಷಣದ ಎನ್.ಬಿ.ಎ ಮೌಲ್ಯಮಾಪನ ಪ್ರಕ್ರಿಯೆ ರೂಪುಗೊಂಡಿದೆ. ತಾಂತ್ರಿಕ ಶಿಕ್ಷಣದಲ್ಲಿ ಎನ್.ಬಿ.ಎ ಮೌಲ್ಯಮಾಪನ ಗುಣಾತ್ಮಕ ತಾಂತ್ರಿಕ ಶಿಕ್ಷಣಕ್ಕೆ ಕಾರಣವಾಗುತ್ತದೆ. ಎಂದು ಯು.ಎಸ್. ಎ. ಈಸ್ಟ್ ಕರೊಲಿನಾ ವಿ.ವಿಯ ಎ.ಸಿ.ಎಮ್ನ ಪ್ರೊ. ವಿ. ಲಕ್ಷ್ಮೀ ನರಸಿಂಹನ್ ಹೇಳಿದರು. ಅವರು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಆವಿಷ್ಕಾರಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ದಿಕ್ಸೂಚಿ ಮಾತುಗಳನ್ನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವೇಗವಾಗಿ ಕಾಣುತ್ತಿರುವ ಬದಲಾವಣೆಗಳು ಜಗತ್ತನ್ನು ಕಿರಿದಾಗಿಸಿ ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿವೆ ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಕಾರ್ಯದರ್ಶಿ ಎಂ.ರಂಗನಾಥ ಭಟ್ ಮಾತನಾಡಿ ತಾಂತ್ರಿಕ ವಿಚಾರ ಸಂಕಿರಣಗಳು ಜ್ಞಾನದ ವಿನಿಮಯ ಮತ್ತು ಸಂವರ್ಥನೆಗೆ ಸಹಕಾರಿಯಾಗಬೇಕು. ಪ್ರತಿಯೊಬ್ಬರೂ ಉತ್ತಮ ಆವಿಷ್ಕಾರಗಳನ್ನು ನಡೆಸುವಂತಾಗಬೇಕು ಎಂದರು. ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಸ್ವಾಗತಿಸಿದರು. ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಡಾ.ಶಾಂತಾರಾಮ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಡೇಮಿಯಲ್ ಆ್ಯಂಟನಿ ಡಿ ಮೆಲ್ಲೋ ಅತಿಥಿಯನ್ನು ಪರಿಚಯಿಸಿದರು ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ. ಕೃಷ್ಣ ಪ್ರಭು ವಂದಿಸಿದರು. ಡಾ. ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.