ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆ-ಗೆದ್ದ ಅಭ್ಯರ್ಥಿಗಳ ವಿಜಯೋತ್ಸವಕ್ಕೆ ನಿಷೇಧ

Spread the love

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಮೇ 29 ರಂದು ನಡೆದ ಎಲ್ಲಾ ಗ್ರಾಮ ಪಂಚಾಯತಿಗಳ ಮತ ಎಣಿಕೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಮತ ಎಣಿಕೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಅವರ ಬೆಂಬಲಿಗರು ಮತ ಎಣಿಕಾ ಕೇಂದ್ರಗಳ ಸುತ್ತ ನಗರ/ಪಟ್ಟಣ ಪ್ರದೇಶಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಲಾಗಿದೆಯೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರವರು ತಿಳಿಸಿದ್ದಾರೆ.

ಅವರು ಸೋಮವಾರ ತಮ್ಮ ಕಚೇರಿಯಲ್ಲಿ ದಿನಾಂಕ 5-6-15 ರಂದು ಜಿಲ್ಲೆಯ ವಿವಿಧ ಮತ ಎಣಿಕಾ ಕೇಂದ್ರಗಳಲ್ಲಿ ನಡೆಯಲಿರುವ ಮತ ಎಣಿಕೆ ಕುರಿತಂತೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮತ ಎಣಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೂಚನೆಗಳನ್ನು ನೀಡಿದರು. ಶಾಂತಿ ಹಾಗೂ ಸುವ್ಯವಸ್ಥಿತವಾದ ಮತ ಎಣಿಕೆಗೆ ಎಲ್ಲರೂ ಬದ್ಧರಾಗಿರಬೇಕು .ಮತ ಎಣಿಕ ಕಾರ್ಯದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಮತ ಎಣಿಕೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ರೀತಿಯ ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಚುನಾವಣಾ ಮತ ಎಣಿಕೆ ಕಾರ್ಯಕ್ಕೆ ಅಗತ್ಯ ರಕ್ಷಣೆಯನ್ನು ಕೈಗೊಳ್ಳಲಾಗಿದ್ದು ಆಯಾ ತಾಲೂಕಿನ ಸರ್ಕಲ್ ಇನ್ಸ್ ಪೆಕ್ಟರ್‍ರವರಿಗೆ ಮತ ಎಣಿಕೆಯ ರಕ್ಷಣಾ ಕಾರ್ಯದ ಜವಾಬ್ದಾರಿ ವಹಿಸಲಾಗಿದ್ದು ಅಶಾಂತಿಗೆ ಅವಕಾಶ ಇಲ್ಲದಂತೆ ಮತ ಎಣಿಕೆ ಕಾರ್ಯ ನಡೆಸಲು ವ್ಯವಸ್ಥೆ ಮಾಡಲಾಗಿದೆಯೆಂದು ಜಿಲ್ಲಾ ಪೋಲೀಸ್ ಅಧೀಕ್ಷಕ ಶರಣಪ್ಪ ಅವರು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮತ್ತು ಡಿಸಿಪಿ ವಿಷ್ಣು ವರ್ಧನ್ ಸೇರದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು ಮತ್ತು ಮತ ಎಣಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love