Home Mangalorean News Kannada News ಮಂಗಳೂರು: ಜಿಲ್ಲೆಯಲ್ಲಿ ಒಟ್ಟು 1212 ಮತಗಟ್ಟೆಗಳು-183 ಅತೀ ಸೂಕ್ಷ್ಮ – ಎ.ಬಿ.ಇಬ್ರಾಹಿಂ 

ಮಂಗಳೂರು: ಜಿಲ್ಲೆಯಲ್ಲಿ ಒಟ್ಟು 1212 ಮತಗಟ್ಟೆಗಳು-183 ಅತೀ ಸೂಕ್ಷ್ಮ – ಎ.ಬಿ.ಇಬ್ರಾಹಿಂ 

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 29ರಂದು ಒಟ್ಟು 1212 ಮತಗಟ್ಟೆಗಳಲ್ಲಿ 227ಗ್ರಾಮ ಪಂಚಾತ್‍ಗಳ ಒಟ್ಟು 3399 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 378 ಸೂಕ್ಷ್ಮ, 183 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗು 54 ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳು ಇವೆ. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮುಕ್ತ ಹಾಗೂ ನಿಷ್ಪಕ್ಷಪಾತ ಮತದಾನಕ್ಕೆ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

election ಮ

ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಇತರೆ ಚುನಾವಣಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಅಂತಿಮ ಚುನಾವಣಾ ಕಣದಲ್ಲಿ 7619 ಅಭ್ಯರ್ಥಿಗಳು ಇದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿಯ 508 ಮತ್ತು ಪರಿಶಿಷ್ಟ ಪಂಗಡದ 445 ಮಹಿಳೆಯರು, ಹಿಂದುಳಿದ ವರ್ಗಗಳ 935 ಮತ್ತು ಹಿಂದುಳಿದ ವರ್ಗ ‘ಬಿ’ ಯ195 ಹಾಗೂ ಸಾಮಾನ್ಯ ವರ್ಗದಿಂದ 1521 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 3604 ಮಹಿಳೆಯರು ಕಣದಲ್ಲಿದ್ದಾರೆ. ಅದೇ ರೀತಿ ಪ.ಜಾತಿಯ 159, ಪ.ಪಂಗಡದ 91, ಹಿಂ.ವ. 767, ಹಿಂ.”ಬಿ”ವರ್ಗದ 221 ಹಾಗೂ ಸಾಮಾನ್ಯ ವರ್ಗದ 2777 ಅಭ್ಯಥಿಗಳು ಸೇರಿದಂತೆ ಒಟ್ಟು 4015 ಪುರುಷರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾದಿಕಾರಿ ಸದಾಶಿವ ಪ್ರಭು ಅವರು ತಿಳಿಸಿದರು.

ಮಂಗಳೂರು ತಾಲೂಕಿನ ಮತ ಎಣಿಕೆ  ಪದುವಾ ವಿದ್ಯಾ ಸಂಸ್ಥೆ ನಂತೂರು, ಬಂಟ್ವಾಳ ತಾಲೂಕಿನ ಮತ ಎಣಿಕೆಯನ್ನು ಮೊಡಂಕಾಪುವಿನ ಇನ್‍ಫಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ತಾಲೂಕಿನ ಮತ ಎಣಿಕೆ ಉಜಿರೆ ಎಸ್.ಡಿ.ಎಂ.ಪದವಿ ಪೂರ್ವ ಕಾಲೇಜು, ಪುತ್ತೂರು ತಾಲೂಕಿನ ಮತ ಎಣಿಕೆ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ತೆಂಕಿಲ ಹಾಗೂ ಸುಳ್ಯ ತಾಲೂಕಿನ ಮತ ಎಣಿಕೆ ಸುಳ್ಯ ನೆಹರೂ ಸ್ಮಾರಕ ಕಾಲೇಜು ಇಲ್ಲಿ ಜೂನ್ 5ರಂದು  ನಡೆಸಲಾಗುವುದೆಂದು ಸದಾಶಿವಪ್ರಭು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯಿಂದ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ವಿಶೇಷ ರೀತಿಯ ಸುರಕ್ಷಾ ಕಾರ್ಯಗಳನ್ನು ಮಾಡುವ ಮೂಲಕ ಮತದಾರರು ನಿರ್ಭಿತಿಯಿಂದ ಮತ ಚಲಾಯಿಸಲು ಅನುವು ಮಾಡಲಾಗುವುದೆಂದು ಜಿಲ್ಲಾ ಪೋಲೀಸ್ ಅಧಿಕ್ಷಕರಾದ ಡಾ||ಶರಣಪ್ಪ ಚುನಾವಣಾಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಡಿ.ಸಿ.ಪಿ ವಿಷ್ಣುವರ್ಧನ್, ಚುನಾವಣಾ ವೀಕ್ಷಕರಾದ ಪಿ.ಎಲ್.ಜ್ಯೋತೀಂದ್ರ ಮತ್ತು ಮಲ್ಲೇಶಯ್ಯ ಅವರು ಚುನಾವಣೆ ಮುಕ್ತ ಹಾಗೂ  ನ್ಯಾಯಸಮ್ಮತವಾಗಿ ನಡೆಸಲು ಅನುಸರಿಸಬೇಕಾದ ಮತ್ತು ಚುನಾವಣಾ ನೀತಿ ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಎದುರಿಸಬೇಕಾದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಚುನಾವಣೆ ಮದ್ಯದಂಗಡಿ ಬಂದ್

ಮಂಗಳೂರು : ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ನಿಮಿತ್ತ ಚುನಾವಣೆ ನಡೆಯುವ ಎಲ್ಲಾ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮೇ 28ರ ಮದ್ಯರಾತ್ರಿಯಿಂದ ಮೇ 29ರ ಮಧ್ಯರಾತ್ರಿಯ ತನಕ ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಲಾಗಿದೆ. ಈ ದಿನಗಳಲ್ಲಿ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಗಿ ಇರುವಂತ ಅಂಗಡಿಗಳನ್ನು ಹಾಗೂ ಮಾರಾಟ ಕೆಂದ್ರಗಳನ್ನು ಮುಚ್ಚಲು ದ.ಕ.ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿರತ್ತಾರೆ.


Spread the love

Exit mobile version