ಮಂಗಳೂರು ದಸರಾ ಜನತೆಯ ಹಬ್ಬ; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 

Spread the love

ಮಂಗಳೂರು ದಸರಾ ಜನತೆಯ ಹಬ್ಬ; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 

ಮಂಗಳೂರು: ಮೈಸೂರಿನ ಮಹಾರಾಜರು ಪ್ರಾರಂಭಿಸಿದ ನಾಡಹಬ್ಬ ದಸರಾ ಒಂದೆಡೆಯಾದರೆ, ಇಲ್ಲಿ ನಾರಾಯಣಗುರು ಸ್ಥಾಪಿತ ಕ್ಷೇತ್ರದಲ್ಲಿ ಬೆಳೆದು ಬಂದಿರುವ ಜನತೆಯ ಹಬ್ಬ ಮಂಗಳೂರು ದಸರಾ ಕೂಡಾ ಅಷ್ಟೇ ಪ್ರಮುಖವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಭಾನುವಾರ ಸಾಯಂಕಾಲ ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇರೆ ಜಿಲ್ಲೆಗಳಿಂದ ಶಾಸಕರು ಬಂದು ದಸರಾ ಉತ್ಸವ ಆಚರಣೆಗೆ ಕೋಟಿ ಕೋಟಿ ರೂ. ಹಣ ಕೇಳುತ್ತಾರೆ, ಆದರೆ ಇಲ್ಲಿನ ವಿಶೇಷ ಎಂದರೆ, ಇದುವರೆಗೆ ಯಾರೂ ಬಂದು ಮಂಗಳೂರು ದಸರಾಕ್ಕೆ ಆರ್ಥಿಕ ನೆರವು ಕೇಳಿಲ್ಲ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಗರವನ್ನೇ ಶೃಂಗಾರ ಮಾಡಿ ಉತ್ತಮ ರೀತಿಯಲ್ಲಿ ಸಂಘಟಿಸುತ್ತಿದ್ದೀರಿ ಎಂದು ಶ್ಲಾಘಿಸಿದರು.

ಒಂದೆಡೆ ರಾಜ್ಯ ಬೆಳವಣಿಗೆ ಸಾಧಿಸುತ್ತಾ ಇದೆ, ಆದರೆ ಇನ್ನೊಂದೆಡೆ ಯೋಜನೆಗಳ ಹೆಸರಿನಲ್ಲಿ ನಾವು ತಪ್ಪು ಮಾಡುತ್ತಾ ಪರಿಸರದ ಮೇಲೆ ಆಘಾತ ಉಂಟುಮಾಡುತ್ತಿದ್ದೇವೆ ಎಂದು ವಿಷಾದದ ಮಾತುಗಳನ್ನೂ ಆಡಿದ ಸಿಎಂ ನಾವೆಷ್ಟೇ ವೈಜ್ಞಾನಿಕವಾಗಿ ಬೆಳೆದರೂ ಅಂತಿಮವಾಗಿ ದೇವರೇ ನಮಗೆ ರಕ್ಷಣೆ ಒದಗಿಸಬೇಕು ಎಂದರು.

ಕುದ್ರೋಳಿ ಕ್ಷೇತ್ರ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಕ್ ಉಳಿಪಾಡಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ವಿಧಾನ ಪರಿಷತ್ ಪ್ರತಿಪಕ್ಷ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಐವನ್ ಡಿ’ಸೋಜ, ಎಸ್.ಎಲ್.ಭೋಜೆಗೌಡ, ಹರೀಶ್ ಕುಮಾರ್, ಕುದ್ರೋಳಿ ದೇವಸ್ಥಾನ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಂ, ಉದ್ಯಮಿ ಊರ್ಮಿಳ ರಮೇಶ್ ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಎಸ್ಪಿ ಡಾ.ರವಿಕಾಂತೇಗೌಡ ಮುಂತಾದವರು ಉಪಸ್ಥಿತರಿದ್ದರು.

ದೇವಸ್ಥಾನ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಹರಿಕೃಷ್ಣ ಬಂಟ್ವಾಳ ವಂದಿಸಿದರು. ಯುವ ಕಲಾವಿದೆ ಶಬರಿ ಗಾಣಿಗ ‘ಗ್ಲೋ ಟೆಕ್ನಿಕ್’ ಮೂಲಕ ರಚಿಸಿದ ಸಿಎಂ ಕುಮಾರಸ್ವಾಮಿ ಅವರ ಚಿತ್ರ ಹಸ್ತಾಂತರಿಸಿದರು.

ಪ್ರಗತಿಗೆ ಕೈಜೋಡಿಸಿ: ದಕ್ಷಿಣ ಕನ್ನಡದಲ್ಲಿ ಶ್ರೀಮಂತಿಕೆಯ ಜನರೂ ಇದ್ದಾರೆ, ಎರಡು ಹೊತ್ತಿನ ಊಟಕ್ಕೆ ಕಷ್ಟಪಡುವ ಕುಟುಂಬಗಳೂ ಇರುವುದು ನನಗೆ ಗೊತ್ತಿದೆ. ಎಂಡೋಸಲ್ಫಾನ್ ಪೀಡಿತ ಕುಟುಂಬಗಳ ಪರಿಸ್ಥಿತಿ ಕೆಟ್ಟದಾಗಿದೆ, ಹಾಗಾಗಿ ನಾವು ಮಾಡಬೇಕಾದ ಕೆಲಸ ಸಾಕಷ್ಟಿದೆ, ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಜನಪ್ರತಿನಿಧಿಗಳೂ ತಮ್ಮ ಭಿನ್ನಾಭಿಪ್ರಾಯ ಬಿಟ್ಟು ಸೋದರರಂತೆ ಕೈಜೋಡಿಸಬೇಕು ಎಂದು ಕುಮಾರಸ್ವಾಮಿ ವಿನಂತಿ ಮಾಡಿಕೊಂಡರು.

ಸಿಎಂಗಾಗಿ ಮಳೆಯಲ್ಲೇ ನೆನೆದ ಪೂಜಾರಿ: ಸಾಯಂಕಾಲ 6 ಗಂಟೆಗೆ ಕುದ್ರೋಳಿಯಲ್ಲಿ ದಸರಾ ಉತ್ಸವ ಉದ್ಘಾಟನೆಗೆ ಸಿಎಂ ಕುಮಾರಸ್ವಾಮಿ ಆಗಮಿಸಬೇಕಿತ್ತು. ದೇವಸ್ಥಾನದ ದ್ವಾರದ ಬಳಿ ಜನಾರ್ದನ ಪೂಜಾರಿ ಸಿಎಂ ಅವರನ್ನು ಎದುರುಗೊಳ್ಳಲು ಕಾಯುತ್ತಿದ್ದರು. ಆದರೆ ಆ ವೇಳೆಗೆ ಮಳೆ ಜೋರಾಗಿ ಸುರಿಯಲಾರಂಭಿಸಿತು. ಸಿಎಂ ಬರುವಾಗ ತಡವಾಗುತ್ತದೆ, ಒಳಗೆ ಕುಳಿತುಕೊಳ್ಳಿ ಎಂದು ಸ್ವಯಂಸೇವಕರು ಕೇಳಿಕೊಂಡರೂ ಪೂಜಾರಿ ಕೇಳದೆ, ಸಿಎಂ ಬಂದ ಬಳಿಕವೇ ಬರುತ್ತೇನೆ ಎಂದು ಮಳೆಯಲ್ಲೇ ಕುರ್ಚಿಯಲ್ಲಿ ಕುಳಿತುಬಿಟ್ಟರು.
ಇದನ್ನು ತಮ್ಮ ಭಾಷಣದಲ್ಲೂ ಪ್ರಸ್ತಾಪಿಸಿದ ಸಿಎಂ, ಪೂಜಾರಿಯವರು ದೇಶ ಕಂಡ ಪ್ರಾಮಾಣಿಕ, ಸರಳ ರಾಜಕಾರಣಿ, ನನಗಾಗಿ ಅವರು ಮಳೆಯಲ್ಲಿ ಕುಳಿತದ್ದು ನೋವು ತಂದಿತು. ಅವರು ಕೋಪಿಷ್ಠ, ಆದರೆ ಹೃದಯದಲ್ಲಿ ಕಲ್ಮಶವಿಲ್ಲ, ಅವರು ಮನಸು ಮಾಡಿದರೆ ಕೋಟಿ ಕೋಟಿ ರೂ. ಗಳಿಸಬಹುದಿತ್ತು, ಆದರೆ ಸಮಾಜ ಬದಲಾವಣೆಗೆ ಬದುಕು ಮುಡಿಪಾಗಿಟ್ಟರು, ನಿಮ್ಮಂಥವರು ನಮಗೆ ಮಾದರಿ ಎಂದರು.

ರಾಷ್ಟ್ರಪತಿಯಾಗ್ತೀರಿ ಎಂದ ಪೂಜಾರಿ: ಕುಮಾರಸ್ವಾಮಿಯವರಲ್ಲಿ ವಿನಯ ಇದೆ, ದುರಹಂಕಾರ ಇಲ್ಲ, ಈ ಗುಣ ಅವರ ತಂದೆ ಎಚ್.ಡಿ.ದೇವೇಗೌಡರಿಂದ ಬಂದಿದೆ. ಕುಮಾರಸ್ವಾಮಿಯವರೇ ನೀವು ಬಹಳ ಎತ್ತರಕ್ಕೆ ಹೋಗ್ತೀರಿ, ಆಗ ನಾನು ಇರಲಿಕ್ಕಿಲ್ಲ. ಪೂಜಾರಿ ದೇವರ ಸಮಕ್ಷಮ ಈ ಮಾತು ಹೇಳಿದ್ದರೆಂದು ನೆನಪಿಸಿಕೊಳ್ಳುವಿರಿ ಎಂದು ಜನಾರ್ದನ ಪೂಜಾರಿ ನುಡಿದರು.


Spread the love