ಮಂಗಳೂರು : ಇಂದಿನ ಕಾರ್ಪೋರೇಟ್ ಯುಗದಲ್ಲಿ ಸ್ಫರ್ಧಾತ್ಮಕ ಸಮಾಜದಲ್ಲಿ ಪ್ರತಿಯೊಬ್ಬರೂ ಒತ್ತಡ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಅವರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷಮತೆ ಕೊರತೆಯಾಗುತ್ತದೆ. ಆದ್ದರಿಂದ ಯೋಗ ಕಲಿತು ಶಿಸ್ತು ಬದ್ಧ ಜೀವನ ನಡೆಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷಮತೆಯನ್ನು ಗಳಿಸಬೇಕೆಂದು ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಕರೆ ನೀಡಿದ್ದಾರೆ.
ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಷೆ ಮತ್ತು ಯೋಗ ವಿಜ್ಷಾನಗಳ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ಯೋಗ ಚಿಕಿತ್ಸೆ ಕುರಿತ ನಾಲ್ಕು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯೋಗ ಕಲಿಯಲು ಮೈಸೂರಿಗೆ ವಿದೇಶಿಯರು ತಂಡೋಪತಂಡಗಳಾಗಿ ಆಗಮಿಸುತ್ತಾರೆ, ಇಂದು ಯೋಗದ ಹೆಸರಲ್ಲಿ ಕೆಲವರು ತಮ್ಮ ಉತ್ಪನ್ನಗಳನ್ನು ತಳಕು ಹಾಕಿ ಮಾರಾಟ ಮಾಡುತ್ತಿರುವುದು ವಿಷಾಧನೀಯ ಎಂದು ತಿಳಿಸಿ, ಯೋಗ ಉತ್ತಮ ವ್ಯಕ್ತಿತ್ವ ರೂಪಿಸಲು ನೆರವಾಗುತ್ತದೆ ಎಂದರು
ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಕೊರಿಯಾ ದೇಶದ ವಾಂಕ್‍ವಾಂಗ್ ಡಿಜಿಟಲ್ ವಿಶ್ವವಿದ್ಯಾನಿಲಯದ ಪ್ರೊ: ಜಾಂಗ್‍ಸೂನ್‍ಸಿಯೋ ಅವರು ಮತನಾಡಿ ತಮ್ಮ ದೇಶದಲ್ಲಿ ಯೋಗಾಸಕ್ತರು ಅನೇಕ ಮಂದಿ ಇದ್ದು ಅವರು ಯೋಗ ಕಲಿಕೆಗೆ ಹಾತೊರೆಯುತ್ತಿದ್ದಾರೆ, ಆದ್ದರಿಂದಲೇ ನಾವು ಮಂಗಳೂರು ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿದ್ದೇವೆ ಎಂದ ಅವರು ಯೋಗ ನಮಗೆ ಜೀವನ ಕ್ರಮ ಕಲಿಸಿ ನಮ್ಮ ಆರೋಗ್ಯ ಧೃಡತೆಗೆ ಸಹಕಾರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಕೆ ಬೈರಪ್ಪ ಅವರು ಮಾತನಾಡಿ, ದಕ್ಷಿಣ ಕೊರಿಯಾ ವಿಸ್ವವಿದ್ಯಾನಿಲಯದಿಂದ ಯೋಗ ಕಲಿಯಲು ನಮ್ಮ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿರುವ ತಂಡದ ರೀತಿಯಲ್ಲೆ ಶೀರ್ಘದಲ್ಲಿ ಕೆನಡಾ ಮತ್ತು ಯುರೋಪ್ ನಿಂದಲೂ ಯೋಗಾಸಕ್ತರು ಯೋಗ ಕಲಿಯಲು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ ಟಿ ಡಿ ಕೆಂಪರಾಜು ಸ್ವಾಗತಿಸಿದರು. ಯೋಗ ವಿಭಾಗದ ಮುಖ್ಯಸ್ಥರಾದ ಹಾಗೂ ವ್ಯವಸ್ಥಾಪನಾ ಕಾರ್ಯದರ್ಶಿ ಡಾ ಕೃಷ್ಣ ಶರ್ಮಾ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ತಿರುಮಲೇಶ್ವರ ವಂದಿಸಿದರು.