ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅತಿ.ವಂ.ಪೀಟರ್ ಪಾವ್ಲ್ ಸಲ್ಡಾನಾ ನೇಮಕ
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅತಿ.ವಂ.ಪೀಟರ್ ಪಾವ್ಲ್ ಸಲ್ಡಾನಾ ಅವರನ್ನು ನೇಮಕಗೊಳಿಸಿ ಪೋಪ್ ಜಗದ್ಗುರುಗಳು ಆದೇಶ ಹೊರಡಿಸಿದ್ದಾರೆ.
ಪೋಪ್ ಜಗದ್ಗುರುಗಳ ಆದೇಶವನ್ನು ಪ್ರಸ್ತುತ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಅಲೋಶೀಯಸ್ ಪಾವ್ಲ್ ಡಿಸೋಜಾ ಅವರು ಮಂಗಳೂರಿನ ಬಿಷಪ್ ಹೌಸ್ ನಲ್ಲಿರುವ ಚಾಪೆಲ್ ನಲ್ಲಿ ಮಂಗಳವಾರ ಅಧಿಕೃತವಾದ ಘೋಷಣೆಯನ್ನು ಮಾಡಿದರು.
ಅತಿ.ವಂ.ಪೀಟರ್ ಪಾವ್ಲ್ ಸಲ್ಡಾನಾ ಅವರು ಮಂಗಳೂರು ಧರ್ಮಪ್ರಾಂತ್ಯದ 14ನೇ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದು, ಧರ್ಮಪ್ರಾಂತ್ಯವು 2,48,860 ಕೆಥೊಲಿಕ್ ಕ್ರೈಸ್ತರುನ್ನು ತನ್ನ ವ್ಯಾಪ್ತಿಯ 124 ಚರ್ಚುಗಳಲ್ಲಿ ಹೊಂದಿದೆ.
ಪ್ರಸ್ತುತ ಧರ್ಮಾಧ್ಯಕ್ಷರಾಗಿರುವ ವಂ.ಡಾ. ಅಲೋಶೀಯಸ್ ಪಾವ್ಲ್ ಡಿ’ಸೋಜಾ ಅವರು ಸತತ 22 ವರ್ಷಗಳ ಕಾಲ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದು, ನೂತನ ಧರ್ಮಾಧ್ಯಕ್ಷರು ಅಧಿಕಾರವನ್ನು ಸ್ವೀಕರಿಸುವ ವರೆಗೆ ಆಡಳಿತಾಧಿಕಾರಿಯಾಗಿ ಮುಂದುವರೆಯಲಿದ್ದಾರೆ.
ಮಂಗಳೂರು ಕಿರೆಂ ಮೂಲದ, ಪ್ರಸ್ತುತ ರೋಮಿನ ಫೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾನಿಲಯದಲ್ಲಿ ದೇವತಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿರುವ ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇವರನ್ನು ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಕ್ರೈಸ್ತರ ಪರಮೋಚ್ಛ ಧಾರ್ಮಿಕ ಗುರು ಪೋಪ್ ಫ್ರಾನ್ಸಿಸ್ ಇವರು ನೇಮಕ ಮಾಡಿದ್ದಾರೆ. ಇಂದು (3.7.18) ಭಾರತಕ್ಕೆ ಬಂದ, ಯೇಸುವಿನ ಶಿಷ್ಯ ಸಂತ ತೋಮಸರ ಹಬ್ಬವಾಗಿದ್ದು, ಭಾರತೀಯ ಸಮಯ ಅಪರಾಹ್ನ 3.30 ಗಂಟೆಗೆ ವ್ಯಾಟಿಕನ್, ದೆಹಲಿ ಮತ್ತು ಮಂಗಳೂರಿನಲ್ಲಿ ಏಕಕಾಲದಲ್ಲಿ ಈ ಘೋಷಣೆ ಮಾಡಲಾಯಿತು.
1964 ಎಪ್ರಿಲ್ 27 ರಂದು ಜನಿಸಿದ ಶ್ರೀಯುತರು 1991 ಮೇ 06 ರಂದು ಬಿಜಯ್ ಚರ್ಚ್‌ನಲ್ಲಿ ಅಂದಿನ ಬಿಷಪ್ ಸಾಲ್ವಾದೊರ್ ಡಿಸೋಜ ಇವರಿಂದ ಗುರು ದೀಕ್ಷೆ ಪಡೆದು ನಂತರ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಹಾಗೂ ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ರೋಮ್‌ಗೆ ತೆರಳಿದ ಅವರು ಬೈಬಲ್ ಅಧ್ಯಯನದಲ್ಲಿ 2005ರಲ್ಲಿ ಫೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ನಂತರ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು `ದಿ ಚರ್ಚ್ : ಮಿಸ್ಟರಿ ಆಫ್ ಲವ್ ಎಂಡ್ ಕಮ್ಯೂನಿಯನ್’ ಪುಸ್ತಕ ಬರೆದಿದ್ದಾರೆ.