ಮಂಗಳೂರು:  ನ.5 ಮತ್ತು 6ರಂದು ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ

Spread the love

ಮಂಗಳೂರು:  ನ.5 ಮತ್ತು 6ರಂದು ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ

ಮಂಗಳೂರು: ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನ.5 ಮತ್ತು 6ರಂದು ವಿಶ್ವ ಕೊಂಕಣಿ ಸಮಾರೋಹ ಹಾಗೂ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಸಿ.ಎ.ನಂದಗೋಪಾಲ ಶೆಣೈ, ನ.5ರಂದು ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮವನ್ನು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ದಿಲೀಪ್ ಜಿ.ನಾಯಕ್ ಉದ್ಘಾಟಿಸಲಿದ್ದಾರೆ. ಚಲನಚಿತ್ರ ಕಲಾವಿದೆ ಪಂಢರಿಬಾಯಿ ಅವರ ಭಾವಚಿತ್ರವನ್ನು ಕೊಂಕಣಿ ಕೀರ್ತಿಮಂದಿರದಲ್ಲಿ ಅನಾವರಣಗೊಳಿಸಲಾಗುವುದು. ಕೊಂಕಣಿ ರಂಗಭೂಮಿಯ ಇತಿಹಾಸ ಎಂಬ ಸಂಶೋಧನಾ ಕೃತಿ ಬಿಡುಗಡೆಯಾಗಲಿದೆ. ಗೋವಾದ ರಂಗಕರ್ಮಿ ಹಾಗೂ ಲೇಖಕ ಪುಂಡಲೀಕ ನಾಯಕ್ ಹಾಗೂ ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ವಿಭಾಗದ ಪ್ರಾಧ್ಯಾಪಕ ಡಾ.ಹನುಮಂತ ಚೊಪ್ಡೆಕರ್ ಸಂಪಾದಕತ್ವದಲ್ಲಿ ಕೃತಿ ಸಿದ್ಧಪಡಿಸಲಾಗಿದೆ. ಇದಲ್ಲದೆ ಡಾ.ಬಿ ದೇವದಾಸ ಪೈ ನಡೆಸುತ್ತಿರುವ ಕೊಂಕಣಿ ಭಾಷಾ ವಿಜ್ಞಾನದ ದೀರ್ಘಾವಧಿ ಸಂಶೋಧನೆಯ ಪ್ರಥಮ ಹಂತದ ಸಂಶೋಧನಾ ವರದಿಯೂ ಬಡುಗಡೆಗೊಳ್ಳಲಿದೆ ಎಂದು ತಿಳಿಸಿದರು.

ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಅಂಗವಾಗಿ ಎರಡೂ ದಿನಗಳಲ್ಲಿ ವಿವಿಧ ವಿಚಾರಗೋಷ್ಠಿಗಳು ಜರುಗಲಿವೆ. ನ.5ರಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಸ್ವಾತಂತ್ರ್ಯೋತ್ತರ ಭಾರತದ ಶಿಕ್ಷಣದಲ್ಲಿ ಕೊಂಕಣಿ- ಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಶಿಕ್ಷಣಾಧಿಕಾರಿ ಡಾ. ಆಶೋಕ ಕಾಮತ್ ವಹಿಸಲಿದ್ದಾರೆ. ಐದಾರು ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ. ಅದೇ ಹೊತ್ತಿನಲ್ಲಿ ಸಮಾಂತರವಾಗಿ ಕವಿತಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತ ಕೊಂಕಣಿ ಕವಿತಾ ಸಾದರೀಕರಣದ ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಅಪರಾಹ್ನ 2ಕ್ಕೆ ನಡೆಯಲಿರುವ ಕೊಂಕಣಿ ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಎಚ್.ಎಂ. ಪೆರ್ನಾಲ್ ಹಾಗೂ ಗೋವಾದ ಹಿರಿಯ ಸಾಹಿತಿ ದೇವಿದಾಸ್ ಕದಮ್ ಭಾಗವಹಿಸಲಿದ್ದಾರೆ. ನಂತರ ಕೊಂಕಣಿ ವಾಚನ ಸಂಸ್ಕೃತಿ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕೊಂಕಣಿ ಸಾಹಿತಿ ಗೋಕುಲದಾಸ್ ಪ್ರಭು ವಹಿಸಲಿದ್ದಾರೆ. ಸಂಜೆ 4ರಿಂದ 6 ಗಂಟೆವರೆಗೆ ಮಲ್ಲಿಕಾರ್ಜುನ ಜಾನಪದ ಕಲಾ ತಂಡದಿಂದ ಕುಡುಬಿ ಗುಮ್ಮಟ ನೃತ್ಯ ಪ್ರದರ್ಶನ, ವಿದ್ಯಾರಂಗ ಮಿತ್ರ ಮಂಡಳಿ ಖಾರ್ವಿಕೇರಿ ಕುಂದಾಪುರ ತಂಡದಿಂದ ಸಾಂಪ್ರದಾಯಿಕ ಹೋಳಿ ನೃತ್ಯ, ಶ್ರೀ ಕಟಂಗಲ್ ದಾದಾ ಪೊಂಡಾ ಪಂಗಡದವರಿಂದ ಗೋವಾದ ಹೆಸರಾಂತ ದಿವಲಿ ನಾಚ್ ನೃತ್ಯ ಕಲಾ ಪ್ರದರ್ಶನಗೊಳ್ಳುಲಿದೆ ಎಂದರು.

ನ. 6ರಂದು ಬೆಳಗ್ಗೆ 9ಕ್ಕೆ ಕೊಂಕಣಿಯ ವಿವಿಧ ಸಂಘ ಸಂಸ್ಥೆಗಳು ತಮ್ಮ ತಮ್ಮ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ಆನ್-ಲೈನ್ ಗೋಷ್ಠಿ ಕಾರ್ಯಕ್ರಮವಿರಲಿದೆ. ಬಳಿಕ ಪ್ರಧಾನ ಕಾರ್ಯಕ್ರಮ- ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಗೋವಾ ಉದ್ಯಮಿ ಅವಧೂತ್ ತಿಂಬ್ಲೊ ಉಪಸ್ಥಿತರಿದ್ದು ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಲು ಸ್ಥಾಪಿಸಲಾದ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯನ್ನು ಗೋವಾದ ಹಿರಿಯ ಕೊಂಕಣಿ ಚಿಂತಕ ಮೌಜಿನ್ಹೊ ದೆ ಅಟೈಡೆ ಅವರಿಗೆ ಪ್ರದಾನ ಮಾಡಲಾಗುವುದು.

ಈ ವರ್ಷದ ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಗೋವಾದ ಕೊಂಕಣಿ ಕವಿ, ಲೇಖಕ ಪ್ರಕಾಶ ಡಿ. ನಾಯಕ್ ಅವರ ಮೊಡಕೂಳ್ ಎಂಬ ಕವಿತಾ ಕೃತಿಗೆ ಪ್ರದಾನಿಸಲಾಗುವುದು.

ಬಸ್ತಿ ವಾಮನ ಶಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಮುಂಬೈನ ವೀಣಾ ಅಡಿಗೆ ಅವರಿಗೆ, ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರದ ಸಂಘ ಸಂಸ್ಥೆ ವಿಭಾಗದಲ್ಲಿ ಮಂಗಳೂರಿನ ಸೇವಾ ಭಾರತಿ ಸಂಸ್ಥೆಗೆ ಪ್ರದಾನ ಮಾಡಲಾಗುವುದು.

ಮಧ್ಯಾಹ್ನ 2ಕ್ಕೆ ನಾಟಕ ಕಲಾವಿದ ಕಾಸರಗೋಡು ಚಿನ್ನಾ ಹಾಗೂ ಎಚ್. ಸತೀಶ ನಾಯಕ್ರಿಂದ ಮನಾಂತರಂಗ ಎಂಬ ಕೊಂಕಣಿ ಹಾಸ್ಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಗೋವಾ ವಿಶ್ವವಿದ್ಯಾನಿಲಯದ ನಿವೃತ್ತ ಡೀನ್ ಡಾ. ಕಿರಣ್ ಬುಡ್ಕುಳೆ ಅಧ್ಯಕ್ಷತೆಯಲ್ಲಿ ಕೊಂಕಣಿ ಸಂಶೋಧನೆ: ಸಾಧನೆ ಮತ್ತು ಸವಾಲುಗಳು ವಿಚಾರಗೋಷ್ಠಿ ಜರುಗಲಿದೆ. ಗೋವಾದ ಪ್ರಾಧ್ಯಾಪಿಕೆ ಹಾಗೂ ಕಲಾವಿದೆ ಡಾ. ತನ್ವಿ ಕಾಮತ್ ಬಾಂಬೋಳಕರ್ ಭಾಗವಹಿಸುವರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪ್ರೈ, ಕೋಶಾಧಿಕಾರಿ ಬಿ.ಆರ್. ಭಟ್, ವಿಶ್ವಸ್ಥ ಮಂಡಳಿಯ ರಮೇಶ್ ನಾಯಕ್, ದೇವದಾಸ ಪೈ ಉಪಸ್ಥಿತರಿದ್ದರು.


Spread the love