ಮಂಗಳೂರು: ಪದವಿಯಲ್ಲಿ ತುಳು ಪಠ್ಯ – ಸಂತ ಅಲೋಶಿಯಸ್ ಕುಲಪತಿಯವರಿಗೆ ಸನ್ಮಾನ
ಮಂಗಳೂರು: ಪದವಿ ತರಗತಿಯಲ್ಲಿ ತುಳು ಪಠ್ಯವನ್ನು ಜಾರಿಗೊಳಿಸಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಂದನೀಯ ಡಾ.ಪ್ರವೀಣ್ ಮಾರ್ಟೀಸ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು .
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈ, ನಾಗೇಶ್ ಕುಮಾರ್ ಉದ್ಯಾವರ, ಬೂಬ ಪೂಜಾರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯವು ಮುಂದಿನ ದಿನಗಳಲ್ಲಿ ತುಳು ಸ್ನಾತಕೋತ್ತರ ಪದವಿ (ಎಂ.ಎ)ಯನ್ನು ಆರಂಭಿಸುವಂತೆ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ವಂದನೀಯ ಪ್ರವೀಣ್ ಮಾರ್ಟೀಸ್ ಅವರನ್ನು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಂದನೀಯ ಡಾ.ಪ್ರವೀಣ್ ಮಾರ್ಟೀಸ್ ಅವರು ಮಾತನಾಡಿ,ಸ್ಥಳೀಯ ಸಂಸ್ಕೃತಿ,ಭಾಷೆಯ ಅಧ್ಯಯನಕ್ಕೆ ಅಲೋಶಿಯಸ್ ಶಿಕ್ಷಣ ಸಂಸ್ಥೆಯು ಪರಂಪರಗತವಾಗಿ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ಪದವಿ ಶಿಕ್ಷಣದಲ್ಲಿ ತುಳು ಪಠ್ಯವನ್ನು ಜಾರಿ ಮಾಡಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದರು.
ಸಂಸ್ಥೆಯ ‘ಸಾರಂಗ್ ‘ ಸಮುದಾಯ ರೆಡಿಯೋ ಹಾಗೂ ವಿವಿಧ ಅಧ್ಯಯನ ವಿಭಾಗಗಳ ಮೂಲಕ ಪ್ರಾದೇಶಿಕ ಸಂಸ್ಕೃತಿಯ ಪ್ರಸಾರ, ಪ್ರಕಟಣೆ ಹಾಗೂ ಅಧ್ಯಯನಕ್ಕೆ ವಿಶೇಷ ಆದ್ಯತೆ ಮತ್ತು ಪ್ರೋತ್ಸಾವನ್ನು ನೀಡಲಾಗುತ್ತಿದೆ ಎಂದು ವಂದನೀಯ ಡಾ.ಪ್ರವೀಣ್ ಮಾರ್ಟೀಸ್ ತಿಳಿಸಿದರು.