ಮಂಗಳೂರು : ಪಾಲಿಕೆ ತ್ಯಾಜ್ಯ ಘಟಕ : ಪರ್ಯಾಯ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಸೂಚನೆ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯಗಳನ್ನು ಸುರಿಯುವ ಪಚ್ಚನಾಡಿ ಘಟಕದಲ್ಲಿ ಸಮಸ್ಯೆಗಳು ಕಂಡುಬಂದಿರುವುದರಿಂದ ಪರ್ಯಾಯ ಸ್ಥಳ ಹುಡುಕುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೂಚಿಸಿದ್ದಾರೆ.
ಕಲ್ಲು ಕೋರೆ ನಡೆಸಿ ಪಾಳು ಬಿದ್ದಿರುವ ಸ್ಥಳಗಳು ತ್ಯಾಜ್ಯ ನಿರ್ವಹಣೆಗೆ ಸೂಕ್ತವಾಗಿದೆ. ಈ ಬಗ್ಗೆಯೂ ಗಮನಿಸಬೇಕು. ಇಂತಹ ಸ್ಥಳ ದೂರ ಇದ್ದರೂ, ತ್ಯಾಜ್ಯ ನಿರ್ವಹಣೆಗೆ ಸೂಕ್ತವಾಗಿದೆ ಎಂದು ವಿಜಯಭಾಸ್ಕರ್ ತಿಳಿಸಿದರು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿ, ಕಳೆದ ಮಳೆಗಾಳದಲ್ಲಿ ಪಚ್ಚನಾಡಿ ತ್ಯಾಜ್ಯ ಘಟಕದಿಂದ ಸುಮಾರು 8 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ತ್ಯಾಜ್ಯ ಕೆಳಭಾಗಕ್ಕೆ ಹೋಗಿ ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಸಂತ್ರಸûರಿಗೆ ಈಗಾಗಲೇ ತಾತ್ಕಾಲಿಕ ಪರಿಹಾರ ಒದಗಿಸಲಾಗಿದೆ ಎಂದರು.
ಪಚ್ಚನಾಡಿ ಘಟಕದ ಪರಿಶೀಲನೆಗೆ ಉನ್ನತ ತಾಂತ್ರಿಕ ತಂಡ ಬಂದಿದೆ. ತ್ಯಾಜ್ಯ ಘಟಕದ ವಿನ್ಯಾಸವು ವಿಲೇವಾರಿಗೆ ಸೂಕ್ತವಾಗಿಲ್ಲ ಎಂದು ತಂಡ ತಿಳಿಸಿದೆ. ಅಲ್ಲದೇ, ಘಟಕದಲ್ಲಿರುವ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿಗೆ ಸೂಚಿಸಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಉಪ ಆಯುಕ್ತೆ ಗಾಯತ್ರಿ ನಾಯಕ್, ಮಾಜಿ ಮೇಯರ್ ಭಾಸ್ಕರ್ ಮತ್ತಿತರರು ಇದ್ದರು.
ಮಂದಾರ ಭೇಟಿ: ಬಳಿಕ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ತ್ಯಾಜ್ಯದಿಂದ ಸಮಸ್ಯೆಗೀಡಾದ ಮಂದಾರ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಅಹವಾಲು ಆಲಿಸಿದ ಅವರು, ಇಲ್ಲಿನ ನಿರ್ವಸಿತರಿಗೆ ಸೂಕ್ತ ಪರಿಹಾರ ಒದಗಿಸುವ ಸಂಬಂಧ ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಶಾಸಕ ಡಾ. ಭರತ್ ಶೆಟ್ಟಿ ಅವರು, ಇದೊಂದು ದೊಡ್ಡ ದುರಂತವಾಗಿದ್ದು, ಸ್ಥಳೀಯರು ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯವರೊಂದಿಗೂ ಈ ಸಂಬಂಧ ಚರ್ಚಿಸಲಾಗಿದೆ. ತ್ವರಿತವಾಗಿ ನಿರಾಶ್ರಿತರಿಗೆ ಸ್ಪಂದಿಸಬೇಕಾಗಿದೆ ಎಂದು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದರು.
ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ: ನಂತರ ಮುಖ್ಯ ಕಾರ್ಯದರ್ಶಿಯವರು ಮಂಗಳೂರು ನಗರಕ್ಕೆ ನೀರು ಸರಬರಾಜಾಗುವ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿದರು. ಅಣೆಕಟ್ಟಿನಲ್ಲಿ ನೀರು ಸಂಗ್ರಹ ಮಟ್ಟವನ್ನು ವೀಕ್ಷಿಸಿದ ಅವರು, ಮುಂದಿನ ಬೇಸಿಗೆಯಲ್ಲಿ ನಗರದಲ್ಲಿ ಯಾವುದೇ ರೀತಿ ನೀರಿನ ಕೊರತೆಯಾಗದಂತೆ ನೀರು ಸರಬರಾಜು ಮಾಡಲು ಸೂಚಿಸಿದರು.
ಈಗಿನ ವ್ಯವಸ್ಥೆಯಲ್ಲಿ ಅಣೆಕಟ್ಟಿನಲ್ಲಿ 6 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸುವುದು ಸೂಕ್ತವಾಗಿದೆ. ಇದೇ ಮಟ್ಟದಲ್ಲಿ ನೀರು ನಿಲ್ಲಿಸಿ, ಅಗತ್ಯ ಬಿದ್ದರೆ ರೇಶನಿಂಗ್ ವ್ಯವಸ್ಥೆ ಮೂಲಕ ನೀರು ಸರಬರಾಜು ಮಾಡಲು ಅವರು ಸೂಚಿಸಿದರು.