ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ ಸಿಪಿಎಂ ಮನವಿ
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದೆ.
ನಗರದಲ್ಲಿಂದು ಗೃಹಸಚಿವರನ್ನು ಭೇಟಿಯಾದ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ನೇತೃತ್ವದ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಕೋಮು ಶಕ್ತಿಗಳಿಗೆ ಮುಕ್ತ ಅವಕಾಶ ಕೊಟ್ಟು, ಜಾತ್ಯತೀತ, ಜನಪರ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಜನಪರ ಸಂಘಟನೆಗಳು ಹಮ್ಮಿಕೊಳ್ಳುವ ಬೇಡಿಕೆ ಆಧಾರಿತ ಧರಣಿ, ಪ್ರತಿಭಟನೆಗಳನ್ನು ತಡೆಯುವುದು, ಮುಖಂಡರ ಮೇಲೆ ಮೊಕದ್ದಮೆ ಹೂಡುವುದು ಮಾಡುತ್ತಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರು ಎಡಪಕ್ಷಗಳು, ಜನಪರ, ಜಾತ್ಯತೀತ ಸಂಘಟನೆಗಳು, ಜನಸಾಮಾನ್ಯರ ಬೇಡಿಕೆಗಳ ಮೇಲಿನ ಪ್ರತಿಭಟನೆಗಳ ಕುರಿತು ಅಸಹನೆ ಹೊಂದಿದ್ದಾರೆ. ಜನ ಸಾಮಾನ್ಯರ, ನೊಂದವರ ಸಮಸ್ಯೆಗಳನ್ನು ಇಟ್ಟು ಕೊಂಡು ನಡೆಸುವ ಧರಣಿ, ಪ್ರತಿಭಟನೆಗಳಿಗೆ ಅನುಮತಿ ನೀಡದೆ ಸತಾಯಿಸುತ್ತಾರೆ. ಭೇಟಿಗೆ ಹೋದರೆ ಅನಗತ್ಯವಾಗಿ ತಾಸುಗಟ್ಟಲೆ ಕಾಯಿಸುತ್ತಾರೆ. ಅದೇ ಸಂದರ್ಭ, ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋಮುಶಕ್ತಿಗಳ ಚಟುವಟಿಕೆಗಳಿಗೆ, ನಿಯಮ ಉಲ್ಲಂಘನೆಯ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರ ಇಷ್ಟಪಡದ ಯಾವುದೇ ಪ್ರತಿಭಟನೆಗಳಿಗೆ ಕಮಿಷನರ್ ಅನುಮತಿ ನೀಡುತ್ತಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ ರ ದ್ವೇಷ ಭಾಷಣ ಖಂಡಿಸಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು, ಆ ಸಂದರ್ಭ ಕೇವಲ 25 ಕಾರ್ಯಕರ್ತರು, ಧ್ವನಿವರ್ಧಕ ಬಳಸದೆ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೆವು. ಆ ಪ್ರತಿಭಟನೆಯಲ್ಲಿ ಭಾಗಿಯಾದ ಪ್ರತಿಯೊಬ್ಬರ ಮೇಲೂ ಎಫ್ ಐಆರ್ ದಾಖಲಾಯಿತು. ನ.3ರಂದು ಫೆಲೆಸ್ತೀನ್ ಮೇಲಿನ ಸಾಮ್ರಾಜ್ಯಶಾಹಿ ದಾಳಿ ಖಂಡಿಸಿ ಎಡಪಕ್ಷಗಳು ರಾಷ್ಟ್ರಮಟ್ಟದಲ್ಲಿ ನೀಡಿದ ಕರೆಯ ಭಾಗವಾಗಿ ಮಂಗಳೂರಿನಲ್ಲಿ ಪ್ರತಿಭಟನಾ ಸಭೆ ನಡೆಸಿದ್ದೆವು. ಆ ಸಭೆಗೂ ಕಮಿಷನರ್ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದರು. ಆಗಲೂ, ಧ್ವನಿವರ್ಧಕ ಬಳಸದೆ, ಯಾರಿಗೂ ತೊಂದರೆ ಆಗದಂತೆ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಆ ಪ್ರತಿಭಟನೆ ನಡೆಸಿದ್ದಕ್ಕಾಗಿ ಎಡಪಕ್ಷಗಳ ಒಂಭತ್ತು ಮುಖಂಡರ ಮೇಲೆ ಎಫ್ ಐಆರ್ ದಾಖಲಿಸಲಾಯಿತು. ನ.26ರಂದು ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ, ರಸ್ತೆ ಗುಂಡಿ ಮುಚ್ಚಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಧರಣಿ ನಡೆಸಿದವು. ಅನುಮತಿ ಕೋರಿ ಎರಡು ವಾರಗಳ ಮುಂಚಿತವಾಗಿಯೇ ಕಮಿಷನರ್ ಅವರಿಗೆ ನಿಯಮದಂತೆ ಪತ್ರ ನೀಡಲಾಗಿತ್ತು. ಈ ಧರಣಿಗೂ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಯಿತು. ಕೊನೆಗೆ, ಶಾಮಿಯಾನ ಹಾಕದೆ, ಧ್ವನಿವರ್ಧಕ ಬಳಸದೆ ಉರಿಬಿಸಿಲಿನಲ್ಲಿ, ರಸ್ತೆಯಿಂದ ದೂರದಲ್ಲಿ, ಸಂಚಾರಕ್ಕೆ ಯಾವುದೇ ತಡೆ ಆಗದ ರೀತಿ ಧರಣಿ ನಡೆಸಲಾಯಿತು. ಈ ಧರಣಿಯ ವಿರುಧ್ಧವೂ ಮುಖಂಡರ ಮೇಲೆ ಎಫ್ಐಆರ್ ಹಾಕಲಾಗಿದೆ ಎಂದು ದೂರಿರುವ ಸಿಪಿಎಂ ನಿಯೋಗ, ಈ ರೀತಿ, ಪದೇ ಪದೆ ಜನಪರ ಸಂಘಟನೆಗಳು ಹಮ್ಮಿಕೊಳ್ಳುವ ಬೇಡಿಕೆ ಆಧಾರಿತ ಧರಣಿ, ಪ್ರತಿಭಟನೆಗಳನ್ನು ತಡೆಯುವುದು, ಮುಖಂಡರ ಮೇಲೆ ಮೊಕದ್ದಮೆ ಹೂಡುವುದು ಕಮೀಷನರ್ ಅವರಿಗೆ ಅಭ್ಯಾಸ ಆಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಶಾಸಕರು, ಸಂಸದರ, ನಗರಪಾಲಿಕೆಯ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲು ಅವಕಾಶ ನೀಡುತ್ತಿಲ್ಲ. ಕೋಮುಶಕ್ತಿಗಳಿಗೆ ಮುಕ್ತ ಅವಕಾಶ ಕೊಟ್ಟು, ಜಾತ್ಯತೀತ, ಜನಪರ ಸಂಘಟನೆಗಳನ್ನು ಹತ್ತಿಕ್ಕುವ ಈ ಕ್ರಮ ಒಂದು ಪಿತೂರಿಯಂತೆ ನಮಗೆ ಕಾಣುತ್ತಿದೆ. ರಾಜ್ಯ ಸರಕಾರದ ನೀತಿಗೂ, ಪೊಲೀಸ್ ಕಮಿಷನರ್ ಅಗರವಾಲ್ ನಡೆಗೂ ಯಾವುದೇ ಹೊಂದಾಣಿಕೆ ಇಲ್ಲ. ಬಿಜೆಪಿ ನೀತಿಗಳನ್ನು ಕಾಂಗ್ರೆಸ್ ಸರಕಾರದ ಅಡಿಯಲ್ಲಿ ಜಾರಿಗೊಳಿಸಲು ಪೊಲೀಸ್ ಆಯಕ್ತರು ಯತ್ನಿಸುತ್ತಿದ್ದಾರೆ. ಇಷ್ಟಲ್ಲದೆ, ನಗರದಲ್ಲಿ ಕ್ರೈಂಗಳು ವಿಪರೀತ ಏರಿಕೆ ಕಂಡಿದೆ. ಅಕ್ರಮ ಮರಳು ಸಾಗಾಟ, ಬೆಟ್ಟಿಂಗ್, ಮಟ್ಕಾ, ಇಸ್ಪೀಟ್ ಕ್ಲಬ್ ಗಳು, ಅಕ್ರಮ ಮಸಾಜ್ ಪಾರ್ಲರ್ ಗಳು ನಾಯಿ ಕೊಡೆಗಳಂತೆ ತಲೆಯೆತ್ತಿವೆ. ಇವೆಲ್ಲವೂ ಕಮಿಷನರ್ ಅಗರವಾಲ್ ರ ಶ್ರೀ ರಕ್ಷೆಯಿಂದಲೇ ನಡೆಯುತ್ತಿರುವ ಆರೋಪಗಳಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದೆ.
ಇದೆಲ್ಲವನ್ನೂ ಮನಗಂಡು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ರ ವಿರುದ್ಧ ತನಿಖೆಗೆ ಆದೇಶಿಸಬೇಕು, ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು, ಮಂಗಳೂರು ನಗರದಿಂದ ಅವರನ್ನು ತಕ್ಷಣ ದಿಂದಲೇ ವರ್ಗಾಯಿಸಬೇಕು, ದಕ್ಷ, ಪ್ರಾಮಾಣಿಕ ಅಧಿಕಾರಿಯೋರ್ವರನ್ನು ಮಂಗಳೂರಿಗೆ ಪೊಲೀಸ್ ಆಯುಕ್ತರನ್ನಾಗಿ ನೇಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.