ಮಂಗಳೂರು: ಮೂಡಬಿದಿರೆಯಲ್ಲಿ ಭಜರಂಗದಳ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿಯರವನ್ನು ಭೀಕರವಾಗಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ, ಸಂಸದ ಬಿ ಎಸ್ ಯಡ್ಯೂರಪ್ಪ ಅಭಿನಂದಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ ಯಡ್ಯೂರಪ್ಪ ಸ್ವತಃ ಪ್ರಶಾಂತ್ ಪೂಜಾರಿಯೇ ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಹೇಳಿ ಸಾವನ್ನಪಿದ್ದರೂ ಕೂಡ ಆರೋಪಿಗಳನ್ನು ಬಂಧಿಸುವಲ್ಲಿ ಗೃಹ ಇಲಾಖೆ ಮೀನಾಮೇಷ ಏಣಿಸುತ್ತಿದ್ದ ಕಾರಣ ದಿನಾಂಕ: ಅಕ್ಟೋಬರ್ 14ರಂದು ನಾನು ಮೂಡಬಿದಿರೆಗೆ ತೆರಳಿ ಮೃತ ಪ್ರಶಾಂತ್ ಪೂಜಾರಿಯ ಕುಟುಂಬಕ್ಕೆ ಸಾತ್ವಂನ ಹೇಳುವ ಜೊತೆಯಲ್ಲಿ “ಈ ಕೊಲೆಯನ್ನು ಯಾರು ಮಾಡಿದ್ದಾರೆ ಎಂಬುದನ್ನು ಮೃತ ಪ್ರಶಾಂತನೇ ಹೇಳಿದ್ದರೂ ಕೂಡ ಈವರೆಗೂ ಆರೋಪಿಗಳನ್ನು ಬಂಧಿಸದೆ ಇರುವುದನ್ನು ಖಂಡಿಸಿ, ಈ ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ಅಕ್ಟೋಬರ್ 19ರ ಒಳಗೆ ಬಂಧಿಸದೇ ಹೋದಲ್ಲಿ ಅಕ್ಟೋಬರ್ 20 ರಂದು ಮಂಗಳೂರಿನಲ್ಲಿ ಕೊಲೆಗೆ ಕಾರಣರಾದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹೋರಾಟ” ಮಾಡಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ ಫಲವಾಗಿ ಎಚ್ಚೆತ್ತ ಸರ್ಕಾರ ಹಾಗೂ ಜಿಲ್ಲಾಡಳಿತ ಈವರೆಗೂ ಒಟ್ಟು 4 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕಾರ್ಯಕ್ಕೆ ಅಭಿನಂದಿಸುತ್ತೇನೆ. ಈ ಕೊಲೆಗೆ ಸಂಬಂಧಿಸಿದ ಆರೋಪಿಗಳು ಯಾರೆ ಆದರೂ, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕೂಡ ಎಲ್ಲಾರನ್ನು ಬಂಧಿಸಿ, ಕಾನೂನಿನಡಿಯಲ್ಲಿ ಸೂಕ್ತ ತನಿಖೆ ಮಾಡುವ ಮೂಲಕ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಕರಾವಳಿ ಭಾಗ ಸೇರಿದಂತೆ ರಾಜ್ಯದಲ್ಲಿ ಕಳೆದ 2-3 ವರ್ಷಗಳಲ್ಲಿ ಅನೇಕ ಕಾರಣಗಳಿಗಾಗಿ ಕೊಲೆ, ಸುಲಿಗೆ, ಕೋಮು ಗಲಭೆಗಳು, ಮಹಿಳೆಯರ ಮೇಲೆ ಅತ್ಯಾಚಾರ, ದರೋಡೆ, ಸರಣಿ ಸರಗಳ್ಳತನ, ಹೆಚ್ಚುತಲೇ ಇದ್ದು, ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ಗೃಹ ಇಲಾಖೆ ನಿಷ್ಕ್ರಿಯವಾಗಿದ್ದು, ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪೋಲೀಸ್ ಇಲಾಖೆಯ ಹಾಗೂ ಇತರೆ ಇಲಾಖೆಯ ಪ್ರಾಮಾಣಿಕ, ದಕ್ಷ, ಅಧಿಕಾರಿಗಳಿಗೆ ಭದ್ರತೆಯೇ ಇಲ್ಲದಂತೆ ಆಗಿರುವ ಈ ಸಂದರ್ಭದಲ್ಲಿ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಮಾಜ ಘಾತಕ ಶಕ್ತಿಗಳನ್ನು ನಿಗ್ರಹಿಸುಲ್ಲಿ ಇನ್ನಾದರೂ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.