ಮಂಗಳೂರು: ಪ್ಲೆಕ್ಸ್ ಬ್ಯಾನರು, ಕಟೌಟ್, ಬಂಟಿಂಗ್ಸ್ ತೆರವುಗೊಳಿಸದಿದ್ದಲ್ಲಿ ಕ್ರಿಮಿನಲ್ ಕೇಸ್
ಮಂಗಳೂರು: ಲೋಕಸಭಾ ಚುನಾವಣೆ ಮತ್ತು ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಸಮಯದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರು ಪ್ಲೆಕ್ಸ್ ಗಳನ್ನು ಈಗಾಗಲೇ ತೆರವುಗೊಳಿಸಲಾಗಿರುತ್ತದೆ. ಆದರೆ ಚುನಾವಣೆ ಮುಗಿದ ತಕ್ಷಣವೇ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ಲೆಕ್ಸ್ ಬ್ಯಾನರ್, ಬಂಟಿಂಗ್ಸ್ಗಳನ್ನು ಅಳವಡಿಸಿರುವುದು ನಗರದ ಸ್ವಚ್ಚತೆ, ಸುರಕ್ಷತೆಗೆ ಅಡ್ಡಿಯಾಗುತ್ತಿರುವುದು ಕಂಡುಬರುತ್ತಿದೆ.
ಕರ್ನಾಟಕ ತೆರೆದ ಜಾಗ ತಡೆಕಾಯ್ದೆ 1981 ಮತ್ತು ಸರಕಾರದ ಅಧಿಸೂಚನೆ ಸಂಖ್ಯೆ ಅಪಜೀ 17/ಇಪಿಸಿ 2012 ಬೆಂಗಳೂರು, ಮಾರ್ಚ್ 11, 2016 ನೇ ಮಾಹೆಯ ಅನ್ವಯ ಪ್ಲೆಕ್ಸ್, ಬ್ಯಾನರುಗಳನ್ನು ಅಳವಡಿಸಲು ಅವಕಾಶವಿಲ್ಲ. ನಗರದ ಸ್ವಚ್ಛತೆಯನ್ನು ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ಲೆಕ್ಸ್ ಬ್ಯಾನರು, ಕಟೌಟ್, ಪೋಸ್ಟರ್, ಬಂಟಿಂಗ್ಸ್ಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಬಾರದು, ಆದರೆ ಕೆಲವು ಕಾರ್ಯಕ್ರಮ ಸಂಘಟಕರು, ಸಿನೆಮಾ ಪ್ರಚಾರಕರು ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ, ಇನ್ನಿತರ ಉದ್ದೇಶಕ್ಕಾಗಿ ಪ್ರಚುರಪಡಿಸಲು ಕಟೌಟ್ ಇತ್ಯಾದಿಗಳನ್ನು ಹಾಕುತ್ತಿರುವುದು ಕಂಡು ಬಂದಿರುತ್ತದೆ. ಈ ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್ ಬ್ಯಾನರು ಇತ್ಯಾದಿಗಳು ನಗರ ಸೌಂದರ್ಯವನ್ನು ಹಾಳು ಮಾಡುತ್ತಿದ್ದು ಭಾರಿ ಪ್ರಮಾಣದ ಘನ ತ್ಯಾಜವು ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ.
ನಗರವನ್ನು ಸ್ವಚ್ಚ ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಈಗಾಗಲೇ ಅಳವಡಿಸಲಾದ ಈ ಎಲ್ಲಾ ಅನಧಿಕೃತಗಳನ್ನು ಸಂಬಂಧಪಟ್ಟ ಸಂಸ್ಥೆ/ವ್ಯಕ್ತಿಗಳು ತಕ್ಷಣ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕರು/ ಸಂಘ ಸಂಸ್ಥೆ/ ಕಾರ್ಯಕ್ರಮ ಸಂಘಟಕರು ಪಾಲಿಕೆ ವ್ಯಾಪ್ತಿಯಲ್ಲಿ ಪ್ಲೆಕ್ಸ್ ಬ್ಯಾನರು, ಕಟೌಟ್, ಬಂಟಿಂಗ್ಸ್ ಅಳವಡಿಸಿದ್ದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಆಯುಕ್ತರು, ಮಹಾನಗರಪಾಲಿಕೆ, ಮಂಗಳೂರು ಇವರ ಪ್ರಕಟನೆ ತಿಳಿಸಿದೆ.