ಮಂಗಳೂರು: ಮೂಡುಬಿದಿರೆಯಲ್ಲಿ ಇತ್ತೀಚೆಗೆ ನಡೆದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆಯನ್ನು ಖಂಡಿಸಿ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ನಾಳೆ(ಅ.20) ಪೂರ್ವಾಹ್ನ 9ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರಿನ ಪುರಭವನದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಜನತೆ ಪಾಲ್ಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕರೆ ನೀಡಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಮುಂತಾದವರು ಭಾಗವಹಿಸಲಿದ್ದಾರೆ.
ಕೊಲೆ ಮಾಡುವ ಮೂಲಕ ನಂಬಿಕೆಗಳನ್ನು ತುಳಿಯುವ ತಾಲಿಬಾನ್ ಸಂಸ್ಕøತಿಯನ್ನು ಪ್ರಜ್ಞಾವಂತ ನಾಗರಿಕರು ಖಂಡನೆ ಮಾಡಲೇಬೇಕು. ಸಾಹಿತಿಯಾಗಲಿ ಜನಸಾಮಾನ್ಯರಾಗಲಿ ಹತ್ಯೆಗೆ ಒಳಗಾಗುವುದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದ ಬಹುಸಂಖ್ಯಾತರ ಮೇಲೆ ಒಂದಲ್ಲಾ ಒಂದು ರೀತಿಯ ದಾಳಿಗಳು ನಡೆಯುತ್ತಿವೆ. ಬಹುಸಂಖ್ಯಾತರಾಗಿರುವ ಹಿಂದುಗಳು ಕರ್ನಾಟಕದಲ್ಲಿ ಎರಡನೇ ದರ್ಜೆಗೆ ತಳ್ಳಲ್ಪಟ್ಟಿದ್ದಾರೆಯೇ ಎಂಬ ಸಂಶಯವನ್ನುಂಟು ಮಾಡಿದೆ. ಕಾಂಗ್ರೆಸ್ ಸರಕಾರದ ತುಷ್ಟೀಕರಣ ನೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಬಹು ಸಂಖ್ಯಾತರಿಗೆ ಇಲ್ಲವೇ? ಗೋವಿನ ಬಗ್ಗೆ ಇರುವ ನಂಬಿಕೆ, ಶ್ರದ್ಧೆಗಾಗಿ ಕಾನೂನಿನ ಚೌಕಟ್ಟಿನಲ್ಲಿ ರಕ್ಷಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಕೊಂಡಿದ್ದ ಎಂಬ ಮಾತ್ರಕ್ಕೆ ಪ್ರಶಾಂತ್ ಪೂಜಾರಿಯನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ. ಹಾಡಹಗಲೇ ಇಂತಹ ಘೋರ ಕೃತ್ಯ ನಡೆದಿದೆ.ರಾಜ್ಯ ಸರಕಾರ ತೋರಿಸುತ್ತಿರುವ ಅಲ್ಪ ಸಂಖ್ಯಾತ ತುಷ್ಟೀಕರಣ ನೀತಿಯಿಂದ ಸಮಾಜ ಘಾತಕ ಶಕ್ತಿಗಳಿಗೆ ಪುಷ್ಟಿ ನೀಡಿದಂತಾಗಿದೆ. ಹಿಂದಿನ ಬಿಜೆಪಿ ಸರಕಾರ ಜಾರಿಗೆ ತರಲು ಇಚ್ಛಿಸಿದ್ದ ಗೋಹತ್ಯಾ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಂಡಿರುವುದು,ಗೋ ಸೇವಾ ಆಯೋಗವನ್ನು ರದ್ದುಪಡಿಸಿರುವಂತದ್ದು ರಾಜ್ಯದ
ಕಾಂಗ್ರೆಸ್ ಸರಕಾರ ಎಷ್ಟರಮಟ್ಟಿಗೆ ಮುಂದುವರಿದಿದೆ ಮತ್ತು ಬಹು ಸಂಖ್ಯಾತರ ಭಾವನೆಯನ್ನು ಹೇಗೆ ದಮನಿಸಹೊರಟಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಅಲ್ಪಸಂಖ್ಯಾತರಿಗೊಂದು ಬಹುಸಂಖ್ಯಾತರಿಗೊಂದು ಎಂಬ ದ್ವಂದ್ವ ನೀತಿಯನ್ನು ರಾಜ್ಯ ಸರಕಾರ ಅನುಸರಿಸುತ್ತಿದೆ. ಗೋ ಕಳ್ಳರಿಂದ ಗೋವುಗಳ ರಕ್ಷಣೆ ಮಾಡಿದವರ ಮೇಲೆಯೇ ಕೇಸು ದಾಖಲಾಗುವ ಸನ್ನಿವೇಶ ಸೃಷ್ಟಿಯಾಗಿರುವುದು ದುರಂತ. ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ದಾದ್ರಿ ಪ್ರಕರಣ ರಾಷ್ಟ್ರೀಯ ಸುದ್ದಿಯಾಯಿತು. ದಾದ್ರಿ ಪ್ರಕರಣದಲ್ಲಿ ವಿಚಾರವಾದಿಗಳು, ಬುದ್ದಿಜೀವಿಗಳು ಎನಿಸಿಕೊಂಡವರು ಬಹು ಸಂಖ್ಯಾತರ ಭಾವನೆಗೆ ನೋವನ್ನುಂಟು ಮಾಡುವ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಅಲ್ಪಸಂಖ್ಯಾತರು ಏನು ಮಾಡಿದರೂ ನಡೆಯುತ್ತದೆ ಎಂಬ ನಿಲುವನ್ನು ಕಾಂಗ್ರೆಸ್ ಸರಕಾರ ತಲೆಯುತ್ತಿರುವುದು ಆತಂತಕಾರಿ ಬೆಳವಣಿಗೆ. ಬಹುಸಂಖ್ಯಾತ ಸಮಾಜ ಇದರ ವಿರುದ್ಧ ಧ್ವನಿ ಎತ್ತಬೇಕು. ಅ.20ರಂದು ನಡೆಯುವ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಬೇಕು ಎಂದು ಪ್ರತಾಪಸಿಂಹ ನಾಯಕ್ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.