ಮಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

Spread the love

ಮಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

ಮಂಗಳೂರು: ಎರಡೂವರೆ ವರ್ಷಗಳ ಹಿಂದೆ ನಗರದ ಕುಲಶೇಖರದ ಕಾಸ್ತಾಲಿನೊ ಕಾಲೋನಿ ಸೆಕ್ರೆಡ್ ಹಾರ್ಟ್ ಎಂಬಲ್ಲಿನ ಮನೆಯಿಂದ ಚಿನ್ನಾಭರಣ ಕಳವುಗೈದ ಪ್ರಕರಣದ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳದ ಬೆಳ್ಮಣ್ ನಿವಾಸಿ ರೋಹಿತ್ ಮಥಾಯಿಸ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಥಾಯಿಸ್ ಮುಂಬೈಗೆ ಪರಾರಿಯಾಗಿದ್ದನು. ಬಂಧಿತ ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

2021ನೇ ಡಿಸೆಂಬರ್ ತಿಂಗಳಿನ ಮೊದಲನೇ ವಾರದಲ್ಲಿ ಕುಲಶೇಖರದ ಮಹಿಳೆಯೊಂದಿಗೆ ವಾಸಮಾಡಿಕೊಂಡಿದ್ದ ಆರೋಪಿ ರೋಹಿತ್ ಮಥಾಯಿಸ್ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಎಗರಿಸಿಕೊಂಡು ಪರಾರಿಯಾಗಿರುವುದಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ರೋಹಿತ್ ಮಥಾಯಿಸ್ನನ್ನು ಪೊಲೀಸರು ದಸ್ತಗಿರಿ ಮಾಡಿ ಆತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

2019ರಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಣ್ಮಣ್ ಎಂಬಲ್ಲಿ ಹಣ ಮತ್ತು ಚಿನ್ನಾಭರಣಗಳ ಆಸೆ ಗಾಗಿ ತನ್ನ ನೆರೆಮನೆಯ ನಿವೃತ್ತ ಪಿಡಿಒ ಭರತಲಕ್ಷ್ಮೀ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ರೋಹಿತ್ ಮಥಾಯಿಸ್ ಆರೋಪಿಯಾಗಿದ್ದನು.

ಮಹಿಳೆಯನ್ನು ಕೊಲೆಗೈದು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ನಲ್ಲಿ ಸುತ್ತಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಥಾಯಿಸ್ ಬಂಧಿತನಾಗಿ ಜೈಲುವಾಸ ಅನುಭವಿಸಿ ಹೊರಬಂದಿದ್ದನು. ನಂತರ ಪ್ರಕರಣದ ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದನು ಎನ್ನಲಾಗಿದೆ.

ಆರೋಪಿ ರೋಹಿತ್ ಮಥಾಯಿಸ್ ತನ್ನ ಸಮುದಾಯಯ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿ ಕೊಂಡು ಅವರ ವಿಶ್ವಾಸಗಳಿಸಿ, ನಂತರ ಅವರ ಹಣ ಹಾಗೂ ಚಿನ್ನಾಭರಣ ಕಳವುಗೈದು ಪರಾರಿಯಾಗುವ ಸ್ವಭಾವದವನಾಗಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಿನ್ನಾಭರಣಗಳನ್ನು ಕಳವುಗೈದು ಮುಂಬೈಗೆ ಪರಾರಿಯಾಗಿದ್ದ ಆರೋಪಿಯು ಮುಂಬೈನಿಂದ ಮಂಗಳೂರಿಗೆ ಬಂದಿರುವ ಮಾಹಿತಿ ಆಧಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ಹಾಗೂ ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ನಾಗರಾಜ್ ಟಿ.ಡಿ ನೇತೃತ್ವದಲ್ಲಿ ಪಿಎಸ್ಐ ವಿನಾಯಕ ಭಾವಿಕಟ್ಟಿ, ಶಿವಕುಮಾರ್, ಯೋಗೀಶ್ವರನ್ ಹಾಗೂ ಎಚ್.ಸಿ ಜಯಾನಂದ ಮತ್ತು ಸಿಬ್ಬಂದಿ ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.


Spread the love