ಮಂಗಳೂರು: ಹೈದರಾಬಾದ್ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಕೇಂದ್ರ ಸಚಿವರುಗಳಾದ ಬಂಡಾರು ದತ್ತಾತ್ರೇಯ ಮತ್ತು ಸ್ಮøತಿ ಇರಾನಿಯವರ ಕೋಮು ರಾಜಕೀಯಕ್ಕೆ ದಲಿತ ತತ್ವಜ್ಞಾನಿ ವಿದ್ಯಾರ್ಥಿಯೊಬ್ಬನ ಬಲಿದಾನವಾಗಿರುವುದು ಖೇದಕರವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ ಆರೋಪಿಸಿದೆ.
ಮೃತ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರು ತನ್ನ ಸಂಘಟನೆಯ ಮೂಲಕ ಕೋಮು ಗಲಭೆಗಳ ಹಿಂದಿರುವ ಸಂಚು, ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಸಿರುವುದನ್ನು ಎಬಿವಿಪಿ ಸಂಘಟನೆ ವಿರೋಧಿಸಿತ್ತು. ಹೀಗೆ ಜನಪರ ಶೈಕ್ಷಣಿಕ ವಿಚಾರಧಾರೆಯ ಮೇಲೆ ನಂಬಿಕೆಯಿಲ್ಲದ ಬಿಜೆಪಿ ಪರ ಎಬಿವಿಪಿ ಸಂಘಟನೆ ಕೇಂದ್ರ ಸರಕಾರವನ್ನು ಉಪಯೋಗಿಸಿತು. ರೋಹಿತ್ ಮೇಲೆ ದ್ವೇಷ ತೀರಿಸಲು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯರು ಆಗಿಂದಾಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮøತಿ ಇರಾನಿಯವರಿಗೆ ಪತ್ರ ಬರೆದು ಒತ್ತಡ ತಂದ ಪರಿಣಾಮ ಕುಲಪತಿಯವರು ನಾಲ್ಕು ದಲಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದು. ಕೇಂದ್ರ ಮಂತ್ರಿಗಳ ಈ ರೀತಿಯ ಕೋಮು ದ್ವೇóಷಕ್ಕೆ ಅರಳುವ ಪ್ರತಿಭೆ ಬಲಿಯಾಗಿರುವುದು ಖಂಡನೀಯ.
ಮದ್ರಾಸ್ ಐಐಟಿಯಲ್ಲಿ ಅಂಬೇಡ್ಕರ್-ಪೆರಿಯಾರ್ ಅಧ್ಯಯನ ಕೇಂದ್ರವನ್ನು ನಿಷೇಧಿಸಿದ್ದು, ಹರಿಯಾಣದಲ್ಲಿ ದಲಿತ ಮಕ್ಕಳನ್ನು ದಹಿಸಿ `ನಾಯಿಗಳ ಸಾವು’ ಎಂದದ್ದು –ಇವೆಲ್ಲಾ ಮೋದಿಯವರ ಸರಕಾರದಲ್ಲಿರುವ ಮಂತ್ರಿಗಳ ಕೋಮು ದ್ವೇಷದ ಸಾಕ್ಷಿಗಳು. ಈ ಕೂಡಲೇ ಈ ಮಂತ್ರಿಗಳನ್ನು ಸರಕಾರದಿಂದ ಕೈ ಬಿಡಬೇಕು ಹಾಗೂ ವಿವಿ ಕುಲಪತಿಯನ್ನು ವಜಾಗೊಳಿಸಬೇಕೆಂದು ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ. ಕುಕ್ಯಾನ್ ಆಗ್ರಹಿಸಿದ್ದಾರೆ.