ಮಂಗಳೂರು: ರ್ಯಾಗಿಂಗ್ ಎನ್ನುವುದು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ನೀಡುವ ಕಿರುಕುಳವಾಗಿದೆ. ಹೊಸತಾಗಿ ಕಾಲೇಜಿಗೆ ಸೇರಿದವರಿಗೆ ಮೋಜಿಗಾಗಿ ಕೃತ್ಯ ಮಾಡುವುದು ಮಾರಕವಾಗಿದೆ. ಜೊತೆಗೆ ಅದು ಕಾನೂನು ರೀತಿಯ ಅಪರಾಧ ಕೂಡ. ಇದು ಇಂದು ನಾವು ಭಾರತದೆಲ್ಲೆಡೆ ಸಾಮಾನ್ಯವಾಗಿ ಕೇಳುತ್ತಿರುವ ಸುದ್ಧಿ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಮತ್ತು ವಿಕಾಸ್ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ರ್ಯಾಗಿಂಗ್ (ಕಿರುಕುಳ) ತಡೆ ಕಾರ್ಯಾಗಾರವನ್ನು ದಿನಾಂಕ 30-07-2015 ರಂದು ವಿಕಾಸ್ ಕಾಲೇಜಿನ ಹಾಲ್ಟೆಲ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ನಿಧನರಾದ ದೇಶದ 11 ನೇ ರಾಷ್ಟ್ರಪತಿಗಳಾದ ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು ಮತ್ತು ಎರಡು ನಿಮಿಷಗಳ ಮೌನಾಚರಣೆ ಮಾಡುವ ಮುಖಾಂತರ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಮುಖ್ಯ ಉದ್ಘಾಟಕರಾಗಿ ಶ್ರೀ ಬೈಲೂರು ಶಂಕರರಾಮ ಸನ್ಮಾನ್ಯ ಪ್ರಧಾನ ನ್ಯಾಯಾಧೀಶ, ಕೌಟುಂಬಿಕ ನ್ಯಾಯಾಲಯ, ಮಂಗಳೂರು, ಇವರು ಮಾತನಾಡಿ ಅಬ್ದುಲ್ ಕಲಾಂರವರು ಎಲ್ಲರಿಂದ ನಿರೀಕ್ಷಿಸಿದಂತೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳೊಡನೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಪ್ರೀತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬಹುದು. ಮತ್ತು ಆ ಮೂಲಕ ರ್ಯಾಗಿಂಗ್ನ್ನು ತಡೆಯಬಹುದು ಅಲ್ಲಿ ನಿಜವಾದ ಪ್ರೀತಿ ಸೃಷ್ಠಿಯಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ. ಬಿ. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಜಿಲ್ಲಾ ಸೇವಾ ಪ್ರಾಧಿಕಾರ, ದಕ್ಷಿಣ ಕನ್ನಡ ರವರು ಮಾತನಾಡುತ್ತಾ ಪ್ರತಿಯೊಬ್ಬರು ಅವರ ಸ್ಥಾನಕ್ಕೆ ಅನುಗುಣವಾಗಿ ಕರ್ತವ್ಯವನ್ನು ನಿರ್ವಹಿಸತಕ್ಕದ್ದು ಮತ್ತು ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಅತ್ಯುತ್ತಮ ಪರಿಣಿತಿಯನ್ನು ಪಡೆಯಬೇಕೆಂದು ಮತ್ತು ಈ ರೀತಿಯ ಕಾನೂನು ಅರಿವು ರ್ಯಾಗಿಂಗ್ ಮಾಡದೇ ಇರಲಿ ಮತ್ತು ಮುನ್ನೆಚ್ಚರಿಕೆ ವಹಿಸಲಿ ಎಂದು ನೀಡಲಾಗುತ್ತಿದೆಯೇ ಹೊರತು ತಪ್ಪು ಮಾಡಲು ಅಲ್ಲ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಎ. ಉದಯಾನಂದ, ಹಿರಿಯ ನ್ಯಾಯವಾದಿಗಳು, ಮಂಗಳೂರು ವಕೀಲರ ಸಂಘ ಇವರು ಮಾತನಾಡಿ ನಾನಾ ರೀತಿಯ ರ್ಯಾಗಿಂಗ್ , ಅದರ ಬಹುರೂಪದ ಕುರಿತು ಮಾತನಾಡಿದರು. ರ್ಯಾಗಿಂಗ್ ಅನುಭವಿಸಿದ ಮಕ್ಕಳಿಗೆ ತಮಗಾದ ಅನುಭವವನ್ನು ಧೈರ್ಯವಾಗಿ ಹೇಳಿಕೊಳ್ಳುವಂತೆ ಕೇಳಿಕೊಂಡರು. ಅಗತ್ಯ ಬಿದ್ದಲ್ಲಿ ಯಾವುದೇ ಅಧಿಕಾರಿ ಕೂಡ ಅವರ ಸಹಾಯಕ್ಕೆ ಬರಲು ಸಿದ್ಧ ಎಂದರು. ಮಾನಸಿಕವಾಗಿ ಕುಗ್ಗಿದವರು ಇಂತಹ ಕೃತ್ಯಕ್ಕೆ ಮುಂದಾಗುತ್ತಾರೆ. ರ್ಯಾಗಿಂಗ್ ಸಂಬಂಧಪಟ್ಟಂತೆ ಕಾನೂನಿನಡಿಯಲ್ಲಿ ಇರುವ ಹಲವಾರು ಪರಿಚ್ಚೇದಗಳ ಬಗ್ಗೆ ತಿಳಿಸಿದರು. ಮಕ್ಕಳ ಕಾನೂನು ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮ ಹಕ್ಕುಗಳಿಗೋಸ್ಕರ ಇತರರೊಂದಿಗೆ ಚರ್ಚಿಸಬೇಕು ಎಂದರು.
ಶ್ರೀ ತಿಲಕಚಂದ್ರ ಸಹಾಯಕ- ಪೆÇೀಲೀಸ್ ಆಯುಕ್ತರು ಮಂಗಳೂರು ನಗರ ಹಾಗೂ ಶ್ರೀ ಕೃಷ್ಣ. ಜೆ ಪಾಲೆಮಾರ್ –ಅಧ್ಯಕ್ಷರು ವಿಕಾಸ್ ವಿದ್ಯಾ ಸಂಸ್ಥೆ, ವಿಕಾಸ್ ಕಾಲೇಜಿನ ಸಲಹೆಗಾರರಾದ ಶ್ರೀಯುತ ಅನಂತ್ ಪ್ರಭು ರವರು ಉಪಸ್ಥಿತರಿದ್ದರು.