ಮಂಗಳೂರು :ವಿವಿ ಪದವಿ ಫಲಿತಾಂಶದ ಗೊಂದಲ ಬಗೆಹರಿಸಲು ಎಬಿವಿಪಿ ಆಗ್ರಹ

Spread the love

ಮಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ 1, 3 ಹಾಗು 5ನೇ ಸೆಮಿಸ್ಟರ್‍ಗಳಿಗೆ ನಡೆದ ಪರೀಕ್ಷೆಗಳ ಪಲಿತಾಂಶ ಪ್ರಕಟಿಸುವಲ್ಲಿ ನಡೆದಿರುವ ಅನೇಕ ಲೋಪಗಳು ಹಾಗು ಗೊಂದಲಗಳಿಗೆ ಕಾರಣವಾಗಿರುವ ವಿವಿಯ ಆಡಳಿತ ಮಂಡಳಿ ವೈಫಲ್ಯಗಳು ಉಂಟಾಗಿದ್ದು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು ಇಡೀ ದೇಶದಲ್ಲೇ ಶೈಕ್ಷಣಿಕ ಕ್ಷೇತ್ರಕ್ಕೆ ಹೆಸರಾಗಿದ್ದು, ಇಲ್ಲಿನ ಅನೇಕ ಸರ್ಕಾರಿ ಹಾಗು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾಭ್ಯಾಸಕ್ಕಾಗಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಆಡಳಿತ ಹಾಗು ಶೈಕ್ಷಣಿಕ ಗುಣಮಟ್ಟಕ್ಕೆ ಮಾದರಿಯಾಗಬೇಕಿದ್ದ ವಿವಿಯು ಪಲಿತಾಂಶ ಪ್ರಕಟಣೆಯಂತಹ ಪ್ರಮುಖ ಸಂಗತಿಯಲ್ಲೇ ಲೋಪವೆಸಗಿರುವುದು ಅನೇಕ ವರ್ಷಗಳ ಇತಿಹಾಸವಿರುವ ಮಂಗಳೂರು ವಿವಿಗೆ ಆಡಳಿತ ಮಂಡಳಿಯು ಅಪಮಾನ ಮಾಡಿರುವಂತಾಗಿದೆ.
ಪರೀಕ್ಷೆ ನಡೆದು ಸುಮಾರು ಎರಡು ತಿಂಗಳುಗಳಾದರೂ ಸಹ ಪಲಿತಾಂಶ ಪ್ರಕಟಣೆಯಲ್ಲಿ ವಿಳಂಬ ಧೋರಣೆ ಅನುಸರಿಸಿ, ನಂತರ ಅ.ಭಾ.ವಿ.ಪ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ವಿವಿಯು ಪಲಿತಾಂಶವನ್ನು ಪ್ರಕಟಿಸಿದೆ. ಆದರೆ ವಿವಿ ಪ್ರಕಟಿಸಿರುವ ಪಲಿತಾಂಶವು ಸಂಪೂರ್ಣ ಲೋಪದಿಂದ ಕೂಡಿರುವುದಾಗಿದೆ. ಕಳೆದ ಸೆಮಿಸ್ಟರ್‍ನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಭಾರಿ ಅನುತ್ತೀರ್ಣವಾಗಿರುವುದು, ಪರೀಕ್ಷೆಯನ್ನೇ ಬರೆಯದ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು, ಎಲ್ಲವುದಕ್ಕಿಂತ ಹೆಚ್ಚಾಗಿ ಪಲಿತಾಂಶವನ್ನು ಒಮ್ಮೆ ಪ್ರಕಟಿಸಿ ಅಂದೇ ವೆಬ್‍ಸೈಟಿನಿಂದ ತೆಗೆದುಹಾಕಿದ್ದು.. ಈ ರೀತಿ ಹಲವು ಲೋಪಗಳಿರುವ ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿಬರುತ್ತಿದೆ.
ಆದ್ದರಿಂದ, ಈ ಕೂಡಲೇ ಎಲ್ಲಾ ಲೋಪಗಳನ್ನು ಸರಿಪಡಿಸಿ ಸರಿಯಾದ ಪಲಿತಾಂಶವನ್ನು ವಿವಿ ಪ್ರಕಟಿಸಬೇಕು, ಸರಿಯಾದ ಪಲಿತಾಂಶ ಪ್ರಕಟವಾಗುವವರೆಗೆ ಮರುಪರೀಕ್ಷೆ, ಮರುಮೌಲ್ಯಮಾಪನ ಸೇರಿದಂತೆ ಎಲ್ಲಾ ಶುಲ್ಕ ಪಾವತಿಯ ದಿನಾಂಕವನ್ನು ಮುಂದೂಡಬೇಕು. ಅಂತೆಯೇ ಈ ಎಲ್ಲಾ ಲೋಪ ಹಾಗು ಗೊಂದಲಗಳಿಗೆ ಕಾರಣವನ್ನು ವಿವಿ ಕೂಡಲೇ ಬಹಿರಂಗ ಪಡಿಸಬೇಕೆಂದು ಅ.ಭಾ.ವಿಪ ಆಗ್ರಹಿಸಿದೆ.


Spread the love