ಮಂಗಳೂರು ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ – ಶಾಸಕ ಕಾಮತ್
ಮಂಗಳೂರು : ಮಂಗಳೂರು ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಎಂದು ಮಂಗಳೂರು ದಕ್ಷಿಣ ಶಾಸಕ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು.
ಶನಿವಾರ ಮಂಗಳೂರು ನಗರ ಪ್ರಾಧಿಕಾರ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಂಗಳೂರು ಇವರು ಹಮ್ಮಿಕೊಂಡಿದ್ದ ನಗರ ಮಟ್ಟದ ಸಲಹಾ ಸಮಿತಿ ಸಭೆ (ಸಿಟಿ ಲೆವೆಲ್ ಅಡ್ವೈಸರಿ ಫಾರಮ್)ಯಲ್ಲಿ ಅವರು ಮಾತನಾಡಿದರು.
ಮಂಗಳೂರು ಸ್ಮಾರ್ಟ್‍ಸಿಟಿ ಯೋಜನೆಯು ಯಶಸ್ವಿಯಾಗಬೇಕಾದರೆ ಎಲ್ಲ ಇಲಾಖೆಗಳು ಕೈಜೋಡಿಸಿ ಕೆಲಸ ಮಾಡಬೇಕು. ಜೊತೆಗೆ ಯಾವುದೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಜನಸಾಮಾನ್ಯರು ಸದುಪಯೋಗಪಡಿಸಿಕೊಳ್ಳುವಂತೆ ಯೋಗ್ಯವಾದ ರೀತಿಯಲ್ಲಿ ಕಾರ್ಯರೂಪಕ್ಕೆ ತನ್ನಿ ಎಂದು ಸಲಹೆ ನೀಡಿದರು. ಕಾಮಗಾರಿಯ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಬೇಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸ್ಮಾರ್ಟ್‍ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್ ಮಾತನಾಡಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರದೇಶ ಆಧಾರಿತ ಅಭಿವೃದ್ಧಿಯ ಮೂಲಕ ನಗರಾಭಿವೃದ್ಧಿ, ಮರು ಸುಧಾರಣೆ, ಹಸಿರು ಪ್ರದೇಶದ ಅಭಿವೃದ್ಧಿ ಈ ರೀತಿ ವಿಂಗಡಣೆ ಮಾಡುವ ಮೂಲಕ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಾನ್ ಸಿಟಿ ಉತ್ತೇಜನದ ಮೂಲಕ ಮಾಹಿತಿ ತಂತ್ರಜ್ಞಾನ ಅಳವಡಿಕೆ ಜೊತೆಗೆ ನಗರದ ಜನರಿಗೆ ಮೂಲ ಸೌಕರ್ಯ ಸೇವೆಗಳನ್ನು ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಈ ಯೋಜನೆಯ ಅನ್ವಯ ರೂ. 1.91 ಕೋಟಿ ವೆಚ್ಚದಲ್ಲಿ ಎಲ್.ಇ.ಡಿ. ಲೈಟ್ ಆಳವಡಿಸಲಾಗಿದೆ. ರೂ 0.75 ಕೋಟಿ ವೆಚ್ಚದಲ್ಲಿ ಹಂಪನಕಟ್ಟೆಯ ಕ್ಲಾಕ್ ಟವರ್ ನಿರ್ಮಾಣಗೊಂಡಿದೆ. ರೂ. 6.16 ಕೋಟಿ ವೆಚ್ಚದಲ್ಲಿ ನೆಹರೂ ಮೈದಾನದಿಂದ ಹಂಪನಕಟ್ಟೆ ಕ್ಲಾಕ್ ಟವರ್, ಎ.ಬಿ. ಶೆಟ್ಟಿ ವೃತ್ತದವರೆಗೆ ಸ್ಮಾರ್ಟ್ ರಸ್ತೆಯು ಕಾಮಗಾರಿಯಲ್ಲಿದೆ. ಎ.ಬಿ.ಡಿ. ಪ್ರದೇಶಗಳಲ್ಲಿ ಯು.ಜಿ.ಡಿ. ಮತ್ತು ಸ್ಮಾರ್ಟ್‍ರೋಡ್, ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ (ಐ.ಸಿ.ಟಿ)ಯಿಂದ ಕಸಬಾ-ಬೆಂಗ್ರೆ ಪ್ರಾಥಮಿಕ ಶಾಲೆ ಮತ್ತು ಬೆಂಗ್ರೆ ಪ್ರೌಢಶಾಲೆಗಳಿಗೆ ಇ-ಸ್ಮಾರ್ಟ್ ಸ್ಕೂಲ್, ಮಾಸ್ಟರ್ ಪ್ಲಾನ್ ಮೂಲಕ ರೈಲು ನಿಲ್ದಾಣ, ಮಿಲಾಗ್ರೀಸ್ ಚರ್ಚ್, ವೆನ್‍ಲಾಕ್ ಆಸ್ಪತ್ರೆಯವರೆಗೆ ರಸ್ತೆ ಅಗಲೀಕರಣ ಮತ್ತು ಹಳೆಯ ಬಸ್ ನಿಲ್ದಾಣಗಳ ಅಭಿವೃದ್ಧಿ, ಹಂಪನಕಟ್ಟೆಯ ಹತ್ತಿರ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ, ಕಾರ್ ಸ್ಟ್ರೀಟ್ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಪ್ರದೇಶದ ಮರುಸುಧಾರಣೆ, ವೆನ್‍ಲಾಕ್ ಆಸ್ಪತ್ರೆ ಹಾಗೂ ಲೇಡಿಗೋಷನ್ ಮಾಸ್ಟರ್ ಪ್ಲಾನ್ ಯೋಜನೆಯನ್ನು ರೂಪಿಸುವ ಮೂಲಕ ಉನ್ನತೀಕರಣ, ಮಂಗಳಾ ಸ್ಟೇಡಿಯಂ ಅಭಿವೃದ್ಧಿ, ಉರ್ವ ಮಾರ್ಕೆಟ್ ಹತ್ತಿರ ಕಬ್ಬಡ್ಡಿ ಹಾಗೂ ಶೆಟಲ್ ಬ್ಯಾಡ್ಮಿಟನ್ ಕ್ರೀಡೆಗೆ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಸ್ಮಾರ್ಟ್‍ಸಿಟಿ ಲಿ. ಸ್ವತಂತ್ರ ನಿರ್ದೇಶಕಿ ಅಂಬಾ ಶೆಟ್ಟಿ, ಕೆನರಾ ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಮತ್ತಿತರು ಉಪಸ್ಥಿತರಿದ್ದರು.