ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ

Spread the love

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ

ಮಂಗಳೂರು: ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಸುಮಾರು 75 ಕೋಟಿಗೂ ಅಧಿಕ ಮೌಲ್ಯದ 37 ಕೆ.ಜಿ ಎಂಡಿಎಂಎ ಮಾದಕ ದ್ರವ್ಯವನ್ನು ವಶಕ್ಕೆ ಪಡೆದು, ಸಾವಿರಾರು ಯುವ ಜನರ ಬದುಕಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವೊಂದನ್ನು ನಮ್ಮ ಪೊಲೀಸರು ನಿವಾರಿಸಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಮಾದಕ ದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣದ ಪಣತೊಟ್ಟು, ಡ್ರಗ್ಸ್ ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದೇವೆ. ಕೆಲವು ತಿಂಗಳುಗಳ ಹಿಂದೆ ನಾನು ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟಿ ಸ್ವಸ್ಥ ಪರಿಸರ ಕಟ್ಟಿ ಕೊಡುವ ವಾಗ್ದಾನವನ್ನು ಜಿಲ್ಲೆಯ ಜನರಿಗೆ ನೀಡಿದ್ದೆ. ನಮ್ಮ ಈ ಪ್ರಯತ್ನದ ಭಾಗವಾಗಿ ಈಗ ಬಹುದೊಡ್ಡ ಡ್ರಗ್ಸ್ ಜಾಲವೊಂದನ್ನು ಪತ್ತೆ ಮಾಡಲಾಗಿದೆ. ರಾಜ್ಯಾದ್ಯಂತ ಹಬ್ಬಿರುವ ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತೊಗೆಯುವುದು ನಮ್ಮ ಸರಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.


Spread the love