ಮಂಗಳೂರು ಹಳೆ ಬಂದರು ರಸ್ತೆ ಅಭಿವೃದ್ಧಿಗೆ 100 ಲಕ್ಷ ರೂಪಾಯಿ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ಹಳೆ ಬಂದರು ಅಭಿವೃದ್ಧಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಸ್ತುತ ಹ್ಯಾಮಿಲ್ಟನ್ ವೃತ್ತದಿಂದ ಹಳೆಬಂದರಿಗೆ ಹೋಗುವ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಲು ರಾಜ್ಯ ಸರ್ಕಾರದಿಂದ 100 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿಸಿದ್ದಾಗಿ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ಹ್ಯಾಮಿಲ್ಟನ್ ವೃತ್ತದಿಂದ ಮಂಗಳೂರು ಹಳೆ ಬಂದರಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಮಾತುಕತೆ ಮಾಡಿ ವಿಶೇಷ ಅನುದಾನವಾಗಿ ಈ ಮೊತ್ತವನ್ನು ತಂದಿದ್ದು ಹ್ಯಾಮಿಲ್ಟನ್ ವೃತ್ತದಿಂದ ಹಳೆ ಬಂದರಿಗೆ ಹೋಗುವ ರಸ್ತೆಯು ನಾದುರಸ್ತಿಯಾಗಿತ್ತು. ಇನ್ನು ಮುಂದೆ ಈ ರಸ್ತೆಯು ಹೆಚ್ಚು ಸೂಕ್ತವಾಗಲಿದೆ ಎಂದರು.
ಮೀನುಗಾರಿಕೆ ಬಂದರು ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 100 ಕೋಟಿ ರೂಪಾಯಿ ಅನುದಾನ ಒದಗಿಸಿದ್ದು ಈ ಪೈಕಿ ರಾಜ್ಯ ಸರ್ಕಾರ 60 ಶೇ ಮತ್ತು ಕೇಂದ್ರ ಸರ್ಕಾರ 40 ಶೇ. ಅನುಪಾತದಲ್ಲಿ ಮೊತ್ತ ನೀಡಿದೆ ಎಂದರು.
ಈ ಹಣದಿಂದ ಮಂಗಳೂರು ಬಂದರಿನ ಸಮಗ್ರ ಅಭಿವೃದ್ಧಿ ಹಾಗೂ ಆ ಮೂಲಕ ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬದ್ರಿಯಾ ಕಾಲೇಜ್ ಪ್ರಿನ್ಸಿಪಾಲರಾದ ಇಸ್ಮಾಯಿಲ್, ಕಾರ್ಪೊರೇಟರ್ ಅಬ್ದುಲ್ ಲತೀಫ್, ಮಂಗಳೂರು ಭೂನ್ಯಾಯ ಮಂಡಳಿ ಸದಸ್ಯರಾದ ಡೆನ್ನೀಸ್ ಡೇಸಾ, ಅಸ್ಲಾಂ, ನೆಲ್ಸನ್ ಮೊಂತೇರೊ,ಡಿ.ಎಮ್. ಮುಸ್ತಾಫ್, ಎಇಇ ರವಿಕುಮಾರ್, ಎಇ ರತ್ನಾಕರ್ ಮುಂತಾದವರು ಉಪಸ್ಥಿತರಿದ್ದರು.
ಲಕ್ಷದ್ವೀಪಕ್ಕೆ ಅ. 29-31 ನಿಯೋಗ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಲಕ್ಷದ್ವೀಪಕ್ಕೆ ಅಕ್ಟೋಬರ್ 29 ರಿಂದ 31 ರವರೆಗೆ ಉನ್ನತಮಟ್ಟದ ನಿಯೋಗ ಕೊಂಡೊಯ್ಯುವುದಾಗಿ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ಮಂಗಳೂರು ಹಳೆಬಂದರು ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಲಕ್ಷದ್ವೀಪದೊಂದಿಗೆ ಮಾತುಕತೆ ನಡೆಸಿ ವ್ಯಾಪಾರ ವಹಿವಾಟು ಪುನರಾರಂಭ ಮಾಡುವ ನಿಟ್ಟಿನಲ್ಲಿ ಈ ನಿಯೋಗ ಒಯ್ಯುತ್ತಿರುವುದಾಗಿ ತಿಳಿಸಿದರು.
ಲಕ್ಷ ದ್ವೀಪ ಹಿಂದೆ ಸಾಕಷ್ಟು ವಹಿವಾಟು ಮಾಡುತ್ತಿತ್ತು. ಈಗ ಅದು ನಿಲ್ಲಿಸಿದೆ. ಲಕ್ಷ ದ್ವೀಪವನ್ನು ವ್ಯಾಪಾರ ಪುನರಾರಂಭ ಮಾಡುವಂತೆ ಮನವೊಲಿಸಲಾಗುವುದು ಮತ್ತು ಮಂಗಳೂರು ಹಳೆ ಬಂದರಿನಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲು ಮನವಿ ಮಾಡಲಾಗುವುದು ಇದು ಸಾಧ್ಯವಾದರೆ ಲಕ್ಷ ದ್ವೀಪಕ್ಕಾಗಿಯೇ ಪ್ರತ್ಯೇಕ ಜೆಟ್ಟಿಯಾಗುತ್ತದೆ. ಈ ಮೊತ್ತವನ್ನು ಲಕ್ಷದ್ವೀಪವೇ ಪಾವತಿಸುವಂತೆ ಮನವಿ ಮಾಡಲಾಗುವುದು ಎಂದರು.
ತಾವೂ ಈಗಾಗಲೇ ಲಕ್ಷ ದ್ವೀಪದ ಸಂಸದರನ್ನು ಸಂಪರ್ಕಿಸಿದ್ದು ಅವರು ಕೂಡಾ ಮಾತುಕತೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಲಕ್ಷದ್ವೀಪದೊಂದಿಗೆ ಮಾತು ಕತೆ ಫಲಪ್ರದವಾದರೆ ಮಂಗಳೂರು ಬಂದರಿನಲ್ಲಿ ಮತ್ತೆ ವಹಿವಾಟು ವೃದ್ದಿಯಾಗುತ್ತದೆ ಎಂದ ಅವರು ಈಗ ಲಕ್ಷ ದ್ವೀಪ ಕೇರಳಕ್ಕೆ ತನ್ನ ವಹಿವಾಟು ಮುಂದುವರಿಸಿದೆ ಎಂದರು.