Home Mangalorean News Kannada News ಮಕ್ಕಳನ್ನು ಪ್ರತಿಭಟನೆಗೆ ಬಳಸಿಕೊಂಡ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಪ್ರಕರಣ ದಾಖಲಿಸಿ – ನವೀನ್ ಸಾಲಿಯಾನ್

ಮಕ್ಕಳನ್ನು ಪ್ರತಿಭಟನೆಗೆ ಬಳಸಿಕೊಂಡ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಪ್ರಕರಣ ದಾಖಲಿಸಿ – ನವೀನ್ ಸಾಲಿಯಾನ್

Spread the love

ಮಕ್ಕಳನ್ನು ಪ್ರತಿಭಟನೆಗೆ ಬಳಸಿಕೊಂಡ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಪ್ರಕರಣ ದಾಖಲಿಸಿ – ನವೀನ್ ಸಾಲಿಯಾನ್

ಉಡುಪಿ: ಮಂಗಳೂರಿನ ಶಾಲೆಯೊಂದರಲ್ಲಿ ನಡೆದ ಘಟನೆಯನ್ನು ಹಿಡಿದುಕೊಂಡು ಶಾಲೆಯ ಮುಂದೆ ನಿಂತು ಅದೇ ಶಾಲೆಯ ಮಕ್ಕಳನ್ನು ಸೇರಿಸಿಕೊಂಡು ಪ್ರಚೋದನಕಾರಿಯಾಗಿ ಮಾತನಾಡಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರ ಗೂಂಡಾ ವರ್ತನೆ ವಿರುದ್ದ ರಾಜ್ಯ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಸಾಲಿಯಾನ್ ಒತ್ತಾಯಿಸಿದ್ದಾರೆ.

ಶಾಲೆಯೊಂದರ ಶಿಕ್ಷಕಿ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂಬ ನೆಪದಲ್ಲಿ ತನ್ನ ಗೂಂಡಾ ಪಡೆಯೊಂದಿಗೆ ಆಗಮಿಸಿ ಅಲ್ಲಿನ ಶಾಲೆಯ ಆಡಳಿತ ಮಂಡಳಿಯ ಸದಸ್ಯರನ್ನು ಹಾಗೂ ಕ್ರೈಸ್ತ ಸಮುದಾಯದ ಧರ್ಮಭಗಿನಿಯರಿಗೆ ಕೆಟ್ಟ ಭಾಷೆಗಳನ್ನು ಬಳಸಿದ್ದಲ್ಲದೆ ಶಾಲೆಯ ಗೇಟನ್ನು ಮುರಿದು ಹಾಕುವುದಾಗಿ ಬೆದರಿಸುವ ಇವರ ಯಾವ ಪುರುಷಾರ್ಥಕ್ಕೆ ಶಾಸಕರು ಎನ್ನುವುದು ಜಿಲ್ಲೆಯ ಜನ ನಿನ್ನೆಯ ಘಟನೆಯಿಂದ ಅರ್ಥ ಮಾಡಿಕೊಂಡಿದ್ದಾರೆ.

ಶಾಲೆಯಲ್ಲಿ ಯಾವುದೇ ಘಟನೆ ನಡೆದರೆ ಅದನ್ನು ವಿಚಾರಿಸಲು ಶಾಲಾ ಆಡಳಿತ ಮಂಡಳಿ, ಶಿಕ್ಷಕ ರಕ್ಷಕ ಸಂಘ, ಶಿಕ್ಷಣ ಇಲಾಖೆ ಇದ್ದು ಅವರು ತನಿಖೆ ನಡೆಸಬೇಕು. ಅದಕ್ಕೆ ಹೊರತಾಗಿ ಬಿಜೆಪಿಯ ಪುಂಡ ನಾಯಕರು ಶಾಲೆಯ ಎದುರು ಹೋಗಿ ಘೋಷಣೆ ಕೂಗಿದ್ದಲ್ಲದೆ ಮಕ್ಕಳ ಮನಸ್ಸಿನಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಕೆಲಸ ಮಾಡಿರುವುದು ನಾಚಿಕೆಗೇಡು. ನೆಲದ ಕಾನೂನಿಗೆ ಗೌರವ ಕೊಡದವರಿಗೆ ಸರಿಯಾದ ಪಾಠವನ್ನು ಕಲಿಸಬೇಕಾದರೆ ರಾಜ್ಯ ಸರಕಾರ ಶಾಸಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಅಲ್ಲದೆ ಶಾಲೆಯ ಮಕ್ಕಳನ್ನು ಉಪಯೋಗಿಸಿಕೊಂಡು ಪ್ರತಿಭಟನೆ ನಡೆಸಿದ ಅವರ ವಿರುದ್ದ ಮಕ್ಕಳ ರಕ್ಷಣಾ ಸಮಿತಿ ಕೂಡಲೇ ಪ್ರಕರಣ ದಾಖಲಿಸಬೇಕು.

ಈಗಾಗಲೇ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡು ಹತಾಶರಾಗಿರುವ ಬಿಜೆಪಿಗರು ಶಿಕ್ಷಣ ಕಲಿಯುತ್ತಿರುವ ಮುಗ್ದ ಮಕ್ಕಳ ಮನಸ್ಸಿನಲ್ಲಿ ಧರ್ಮ ರಾಜಕೀಯದ ವಿಷವನ್ನು ಬಿತ್ತಿ ಇದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ವ್ಯಕ್ತಿಯನ್ನು ಶಾಸಕರಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನತೆ ಇವರ ಗೂಂಡಾ ವರ್ತನೆಯನ್ನು ಕಂಡು ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ ಇದಕ್ಕೆ ಕಡಿವಾಣ ಹಾಕುವ ಕೆಲಸ ರಾಜ್ಯ ಸರಕಾರ ಕೂಡಲೇ ನಡೆಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version