ಮಕ್ಕಳಿಗೆ ಡಿಪಿಟಿ & ಟಿಡಿ ಲಸಿಕಾ ಅಭಿಯಾನ ಯಶಸ್ವಿಯಾಗಬೇಕು-ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್
ಮಂಗಳೂರು : ಡಿಪಿಟಿ & ಟಿಡಿ ಲಸಿಕಾ ಅಭಿಯಾನವು ಜಿಲ್ಲೆಯಾದ್ಯಂತ ಯಶಸ್ವಿಯಾಗಬೇಕು. ಈ ಕುರಿತು ಅರಿವು ಮೂಡಿಸಿ, ಸೂಕ್ತ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2019ನೇ ಸಾಲಿನ ಡಿಪಿಟಿ & ಟಿಡಿ ಲಸಿಕಾ ಕಾರ್ಯಕ್ರಮ ಮತ್ತು ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಡಿ.ಟಿ.ಎಫ್.ಐ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್-2.0 ಅಭಿಯಾನ ಮತ್ತು ಡಿಪಿಟಿ & ಟಿಡಿ ಲಸಿಕಾ, ಈ ಆಂದೋಲನದ ಕುರಿತು ಅಂಗನವಾಡಿ, ಶಾಲೆಗಳಲ್ಲಿ ಹೆತ್ತವರನ್ನು ತೊಡಗಿಸಿಕೊಂಡು ಸಭೆ ಕರೆಸಿ ಅಭಿಯಾನದ ಸಂಕ್ಷಿಪ್ತ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ಡಿಸೆಂಬರ್ 2019 ರಿಂದ ಮಾರ್ಚ್ 2020 ಇಂದ್ರಧನುಷ್ ಅಭಿಯಾನ ಮತ್ತು ಡಿಸೆಂಬರ್ 11 ರಿಂದ 31 ರವರೆಗೆ ಡಿಟಿಪಿ & ಟಿಡಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗುವಂತೆ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಯಾವ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು. ಸರ್ಕಾರಿ, ಖಾಸಗಿ, ಮತ್ತು ಅನುದಾನಿತ ಶಾಲೆಗಳು ಮಾತ್ರವಲ್ಲದೇ ವಸತಿ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಹಾಗೂ ಇನ್ನಿತರ ಶಾಲೆ ಮಕ್ಕಳನ್ನು ಒಳಗೊಳ್ಳುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಹಾಗೂ ಇತರ ಇಲಾಖೆಗಳು ಮತ್ತು ಸರಕಾರೇತರ ಸಂಸ್ಥೆಗಳ ಸಹಕಾರವನ್ನು ಪಡೆದು ಕಾರ್ಯಕ್ರಮ ನಡೆಯಲಿದೆ. ರಾಜ್ಯದಲ್ಲಿ ಡಿಫ್ತೀರಿಯಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಟಿಡಿ ಹಾಗೂ ಡಿಪಿಡಿ ಲಸಿಕೆ ನೀಡಲಾಗುತ್ತದೆ, ಇದರ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು, ನರ್ಸ್‍ಗಳು, ಮನೆ ಮನೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ತಿಳಿಸಿದರು.
ಡಿಸೆಂಬರ್ 2019 ರಿಂದ ಮಾರ್ಚ್ 2020 ರವರೆಗೆ ಪ್ರತಿ ತಿಂಗಳ ಮೊದಲ ವಾರದಿಂದ ರಜಾದಿನ ಹಾಗೂ ಸಾರ್ವತ್ರಿಕ ಲಸಿಕಾ ದಿನ ಹೊರತುಪಡಿಸಿ ಕೆಲಸದ ಅವಧಿಯಲ್ಲಿ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಮುಖ್ಯವಾಗಿ 0-2 ವರ್ಷದ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರಲ್ಲಿ ಲಸಿಕೆ ವಂಚಿತ ಫಲಾನುಭವಿಗಳಿಗೆ ಲಸಿಕಾಕರಣ ಮಾಡಲಾಗುತ್ತದೆ. ದ.ಕ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಮಹಾನಗರ ವ್ಯಾಪ್ತಿಯಲ್ಲಿ ವಲಸಿಗರು ಇರುವುದರಿಂದ ಐಎಮ್‍ಐ 2.0 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ರಾಜೇಶ್ ಜಿ.ವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಅಧಿಕಾರಿಗಳು, ಉಪಸ್ಥಿತರಿದ್ದರು.