ಮಕ್ಕಳಿಗೆ ನೀಡಬೇಕಾದ ಲಸಿಕೆಗಳ ಬಗ್ಗೆ ಅರಿವಿರಬೇಕು : ಪ್ರೀತಿ ಗೆಹಲೋತ್
ಉಡುಪಿ : ಪೋಲಿಯೋ ಲಸಿಕೆ ಸೇರಿದಂತೆ ಮಕ್ಕಳಿಗೆ ಕಾಲ ಕಾಲಕ್ಕೆ ನೀಡಬೇಕಾದ ಕಡ್ಡಾಯ ಲಸಿಕೆಗಳ ಬಗ್ಗೆ ಎಲ್ಲಾ ತಾಯಿಯಂದರಿಗೆ ಅರಿತಿರಬೇಕು, ಸರಿಯಾದ ಸಮಯಕ್ಕೆ ಅಗತ್ಯ ಮಕ್ಕಳಿಗೆ ಲಸಿಕೆಗಳನ್ನು ಕೊಡಿಸುವುದರ ಮೂಲಕ ಮಕ್ಕಳ ಆರೋಗ್ಯವನ್ನು ಸುಸ್ಥಿತಿಯಲ್ಲಿರುವುದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಹೇಳಿದ್ದಾರೆ.
ಅವರು ಭಾನುವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ , ಉಡುಪಿ, ರಾಷ್ಟ್ರೀಯ ಆರೋg್ಯ ಅಭಿಯಾನ ಸಹಯೋಗದಲ್ಲಿ , ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಭಾರತದಲ್ಲಿ ಪೋಲಿಯೋ ಪ್ರಕರಣ ಪತ್ತೆಯಾಗದಿದ್ದರೂ, ನರೆಯ ರಾಷ್ಟ್ರಗಳಲ್ಲಿ ಪೋಲಿಯೋ ಇದ್ದು, ಅಲ್ಲಿಂದ ವಲಸೆ ಬರುವವರ ಮೂಲಕ ರೋಗಾಣುಗಳು ದೇಶದಲ್ಲಿ ಹರಡುವ ಸಾಧ್ಯತೆಯಿರುವುದರಿಂದ ಎಲ್ಲಾ ಪೋಷಕರು ತಮ್ಮ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸುವಂತೆ ತಿಳಿಸಿದ ಪ್ರೀತಿ ಗೆಹಲೋತ್ , ಆರೋಗ್ಯವಂತ ಮಕ್ಕಳಿಂದ ಆರೋಗ್ಯಯುತ ಸ್ವಸ್ಥ ಸಮಾಜ ನಿರ್ಮಣವಾಗಲು ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲೆಯಲ್ಲಿ 0-5 ವರ್ಷದೊಳಗಿನ 74846 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಿದ್ದು, ಇದಕ್ಕಾಗಿ 658 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ, 2764 ಸ್ವಯಂ ಸೇವಕರು ಹಾಗೂ 133 ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಶಿಖಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ , ರೋಟರಿಯ ಐ.ಕೆ. ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ಜನಾರ್ಧನ ಭಟ್ ಸ್ವಾಗತಿಸಿದರು, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಎಂ.ಜಿ.ರಾಮ ನಿರೂಪಿಸಿದರು.