Home Mangalorean News Kannada News ಮಕ್ಕಳು ಒಳ್ಳೆಯ ಸಂಸ್ಕಾರ ಕಲಿಯುವುದು ಹೆತ್ತ ತಾಯಿಯಿಂದ – ಕುದಿ ವಸಂತ ಶೆಟ್ಟಿ

ಮಕ್ಕಳು ಒಳ್ಳೆಯ ಸಂಸ್ಕಾರ ಕಲಿಯುವುದು ಹೆತ್ತ ತಾಯಿಯಿಂದ – ಕುದಿ ವಸಂತ ಶೆಟ್ಟಿ

Spread the love

ಮಕ್ಕಳು ಒಳ್ಳೆಯ ಸಂಸ್ಕಾರ ಕಲಿಯುವುದು ಹೆತ್ತ ತಾಯಿಯಿಂದ – ಕುದಿ ವಸಂತ ಶೆಟ್ಟಿ

ಉದ್ಯಾವರ: ಮಕ್ಕಳು ಪ್ರೀತಿಸಲು ಕಲಿಯುವುದು ಮತ್ತು ಒಳ್ಳೆಯ ಸಂಸ್ಕಾರ ಕಲಿಯುವುದು ಹೆತ್ತ ತಾಯಿಯಿಂದ ಆದರೆ ಇವತ್ತು ಇಂದು ತಾಯಂದಿರು ತಮ್ಮ ಕರ್ತವ್ಯದ ಬಗ್ಗೆ ಎಚ್ಚರ ತಪ್ಪಿದ್ದಾರೆಯೇ? ಎಂದು ಎನಿಸುತ್ತಿದೆ. ಮಕ್ಕಳು ಹಿರಿಯರ ಮೇಲಿನ ಭಕ್ತಿ, ಗೌರವ, ಬಾಂಧವ್ಯಗಳನ್ನು ಕಳೆದು ಕೊಳ್ಳುತ್ತಿದ್ದಾರೆ. ಪ್ರೀತಿಯನ್ನು ತಪ್ಪು ಅರ್ಥೈಸಿಕೊಳ್ಳುತ್ತಿದ್ದಾರೆ. ಮೊಬೈಲ್, ಟಿ.ವಿ.ಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಇಂದು ಪ್ರಮುಖ ಪಾತ್ರ ವಹಿಸುತ್ತಿರುವುದು ವಿಷಾದನೀಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøರಾದ ಕುದಿ ವಿಷ್ಣುಮೂರ್ತಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕುದಿ ವಸಂತ ಶೆಟ್ಟಿ ಇವರು ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನುಡಿದರು.

udyavara-govt-school-annual-day

ಅವರು ಮುಂದುವರಿಯುತ್ತಾ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರೊಂದಿಗೆ ಹೆತ್ತವರದ್ದೂ ಆಗಿದೆ ಹಾಗಾಗಿ ಹೆತ್ತವರು ಮಕ್ಕಳ ಚಲನ-ವಲನಗಳನ್ನ ಸದಾ ಜಾಗರೂಕರಾಗಿ ಗಮನಿಸಬೇಕು. ವಯೋಸಹಜವಾಗಿ ಬದಲಾವಣೆಗೊಳ್ಳುತ್ತಿರುವ ಅವರ ವ್ಯಕ್ತಿತ್ವದ ಅರಿವನ್ನ ಅವರಿಗೆ ಮೂಡಿಸುವಲ್ಲಿ ಹೆತ್ತವರು ಮುತುವರ್ಜಿಯನ್ನು ವಹಿಸಬೇಕು ಹೀಗಾದಲ್ಲಿ ಮಾತ್ರ ನಾಳಿನ ಮಕ್ಕಳನ್ನು ನಾವು ಬೆಳೆಸಲು ಸಾಧ್ಯವಾದೀತು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೋಗಗ್ರಸ್ಥ ಸಮಾಜ ನಿರ್ಮಾಣವಾದೀತು ಎಂದು ಎಚ್ಚರಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಮಾತನಾಡುತ್ತಾ, ಸರಕಾರಿ ಶಾಲೆಯ ಉಳಿವಿಗೆ ಶಾಲೆಯೊಂದಿಗೆ ಸಮಾಜದ ಕೈಜೋಡಿಸುವಿಕೆ ಅನಿವಾರ್ಯ. ಇಂಗ್ಲಿಷ್ ಮಾಧ್ಯಮದ ಭರಾಟೆಯಲ್ಲಿ ಕನ್ನಡ ಶಾಲೆಗಳು ಇಂದು ಆತಂಕದ ಸ್ಥಿತಿಯಲ್ಲಿದೆ. ಆದರೆ ನಾವೆಲ್ಲ ಒಂದಾಗಿ ದುಡಿದರೆ ಈ ಸರಕಾರಿ ಶಾಲೆಯನ್ನು ಉತ್ತುಂಗಕ್ಕೆ ಏರಿಸಬಹುದು. ಊರ ಜನತೆ ಶಾಲೆಯೊಂದಿಗೆ ಕೈಜೋಡಿಸಿ ಎಂದು ಮನವಿಯನ್ನು ಮಾಡಿದರು.

ಅತಿಥಿಗಳಾಗಿ ಉಡುಪಿ ಜಿ.ಪಂ. ಅಧ್ಯಕ್ಷರಾದ ದಿನಕರ್ ಬಾಬು, ಹಳೆ ವಿದ್ಯಾರ್ಥಿ, ಉದ್ಯಮಿ ಲೋಹಿತ್ ಕುಮಾರ್ ಪಿತ್ರೋಡಿ, ಉದ್ಯಾವರ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಸುಂಗಧಿ ಶೇಖರ್,ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ರಜನಿ ಆರ್. ಅಂಚನ್ ಆಗಮಿಸಿ ಸಂದರ್ಭೋಜಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ರಮೇಶ್ ಆಚಾರ್ಯ, ವಿದ್ಯಾರ್ಥಿ ನಾಯಕರುಗಳಾದ ಶಿವರಾಜ್ ಮತ್ತು ಕು.ರೇಣುಕಾ ಉಪಸ್ಥಿತರಿದ್ದರು.

ಪ್ರಾಂಶುಪಾಲ ಮಹೇಂದ್ರ ಎಂ. ಶರ್ಮ ಸ್ವಾಗತಿಸಿ, ಕಾಲೇಜು ವಿಭಾಗದ ವರದಿ ವಾಚಿಸಿದರು. ಪ್ರೌಡಶಾಲಾ ಮುಖ್ಯ ಶಿಕ್ಷಕಿ  ಮೂಕಾಂಬೆ ಪ್ರೌಡಶಾಲಾ ವಿಭಾಗದ ವರದಿ ವಾಚಿಸಿದರು.

ಉಪನ್ಯಾಸಕಿ ಶ್ರೀಮತಿ ಹರಿಣಿ ಶುಭಸಂದೇಶ ವಾಚಿಸಿದರು ಕಲಿಕಾ ಪ್ರತಿಭಾವಂತರ ಬಹುಮಾನದ ಪಟ್ಟಿಯನ್ನು ಶಿಕ್ಷಕ ಸುಭಾಶ್ ಚೌಹಾನ್ ವಾಚಿಸಿದರೆ, ಕ್ರೀಡಾ ಚಾಂಪಿಯನ್‍ಗಳ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ ನಾಯ್ಕ್ ವಾಚಿಸಿದರು. ಶಿಕ್ಷಕಿ ಪ್ರಭಾ ಬಿ. ವಂದಿಸಿದರು. ಉಪನ್ಯಾಸಕ  ಕಿಶೋರ್ ಎಸ್. ಅವರು ಸಭಾ ಕಾರ್ಯಕ್ರಮವನ್ನು ಮತ್ತು ಶಿಕ್ಷಕಿ ಜಯ ತಂತ್ರಿಯವರು ಸಾಂಸ್ಕøತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಮಾರಂಭದಲ್ಲಿ ಶಿಕ್ಷಕಿ ಪಂಚಾಕ್ಷರಿ ಎ.ವಿ. ಅವರ ಸಂಪಾದಕ್ವದಲ್ಲಿ ಮೂಡಿಬಂದ ವಿದ್ಯಾರ್ಥಿ ಕೈಬರಹ ಪತ್ರಿಕೆ “ಸ್ಪೂರ್ತಿ” ಅನಾವರಣಗೊಂಡಿತು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಕರಾಟೆ ಶಿಕ್ಷಕ ಸಂತೋಶ್ ಸುವರ್ಣ ಇವರ ನಿರ್ದೇಶನದಲ್ಲಿ ಕರಾಟೆ ಪ್ರದರ್ಶನ, ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ಮಕ್ಕಳ ನಾಟಕ “ನಾನು ಗಾಂಧಿ ಆಗ್ತೇನೆ”(ರಚನೆ ಆರ್.ವಿ. ಭಂಡಾರಿ, ನಿರ್ದೇಶನ ಉದ್ಯಾವರ ನಾಗೇಶ್, ಸಹಾಯ ಮತ್ತು ಸಂಗೀತ ಯು. ಯಜ್ಞೇಶ್ವರ ಆಚಾರ್ಯ) ಪ್ರದರ್ಶನಗೊಂಡಿತು.


Spread the love

Exit mobile version