Home Mangalorean News Kannada News ಮಕ್ಕಳ ಸುರಕ್ಷೆಗೆ ಪ್ರಥಮಾದ್ಯತೆ: ಸಚಿವ ಪ್ರಮೋದ್ ಮಧ್ವರಾಜ್

ಮಕ್ಕಳ ಸುರಕ್ಷೆಗೆ ಪ್ರಥಮಾದ್ಯತೆ: ಸಚಿವ ಪ್ರಮೋದ್ ಮಧ್ವರಾಜ್

Spread the love

ಮಕ್ಕಳ ಸುರಕ್ಷೆಗೆ ಪ್ರಥಮಾದ್ಯತೆ: ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ನಾವು ಫಲಿತಾಂಶಕ್ಕಿಂತ ಮಕ್ಕಳ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮಕ್ಕಳ ಸುರಕ್ಷೆಯ ಬಗ್ಗೆ ಹೆಚ್ಚಿನ ಗಮನಹರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಪ್ರತಿನಿಧಿಗಳನ್ನೊಳಗೊಂಡಂತೆ ಸಮಿತಿಯನ್ನು ರಚಿಸುವುದಾಗಿಯೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

image002police-to-patrol-in-NH-from-July-15-to-Implement-road-Safety-measures-madhwaraj-20160706

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಲಾ ಮಕ್ಕಳ ಪ್ರಯಾಣ ವೇಳೆ ಸುರಕ್ಷತಾ ಕ್ರಮವನ್ನು ಅನುಸರಿಸುವ ನಿಟ್ಟಿನಲ್ಲಿ ಕರೆಯಲಾಗಿದ್ದು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿ ಸರ್ಕಾರದ ಹೊಣೆ ಹೆಚ್ಚಿದ್ದು ವಿದ್ಯಾಂಗ ಇಲಾಖೆ ಈ ಹೊಣೆಯನ್ನು ಎಲ್ಲರ ಸಹಕಾರದಿಂದ ನೆರವೇರಿಸಲಿದೆ ಎಂದು ಸಚಿವರು ಹೇಳಿದರು.

ಸರ್ವೋಚ್ಛ ನ್ಯಾಯಾಲಯ ಮಕ್ಕಳ ಸಮಗ್ರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಿದೆ. ಮಕ್ಕಳ ಸಂರಕ್ಷಣೆಗೋಸ್ಕರ ರಾಜ್ಯ ಸರ್ಕಾರ ಹಲವು ಆದೇಶಗಳನ್ನು ಜಾರಿಗೊಳಿಸಿದ್ದು ಈ ಆದೇಶಗಳ ಅನುಷ್ಠಾನ ಹಾಗೂ ಕಾನೂನು ಪಾಲನೆಗೆ ಕ್ರಮಕೈಗೊಳ್ಳಲಾಗುವುದು ಎಂದ ಸಚಿವರು, ಮಕ್ಕಳ ಹೊಣೆಯನ್ನು ನಿರ್ವಹಿಸಲು ಎಲ್ಲರ ಸಹಕಾರದ ಅಗತ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಅವರು ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಆದೇಶ ಮತ್ತು ಕಾನೂನುಗಳ ಬಗ್ಗೆ ವಿವರಿಸಿದರು. ಕಿರಿಯ ಕಾನೂನು ಅಧಿಕಾರಿ ಜ್ಯೋತಿ ಪ್ರಮೋದ್ ನಾಯಕ್ ಅವರು ಕಾನೂನು ಮತ್ತು ಶಿಕ್ಷೆಯ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು. ಸಾರಿಗೆ ಇಲಾಖೆಯ ಇನ್ಸ್‍ಪೆಕ್ಟರ್ ವಿಶ್ವನಾಥ್ ನಾಯಕ್ ಅವರು ಇಲಾಖೆ ಶಾಲೆಗಳಲ್ಲಿ ಅರಿವು ಮೂಡಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ದಿನೇಶ್ ಹೆಗ್ಡೆ ಉಳಿಪ್ಪಾಡಿ ಮಕ್ಕಳ ಹಕ್ಕುಗಳ ಬಗ್ಗೆ, ಇಲಾಖೆಗಳ ಕರ್ತವ್ಯದ ಬಗ್ಗೆ ಗಮನ ಸೆಳೆದರೆ, ಡಾ ಅಶೋಕ್ ಕುಂದಾಪುರ ಅವರು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅತಿವೇಗದ ಬಗ್ಗೆ ಗಮನ ಸೆಳೆದರು. ಸೈಂಟ್ ಅಂಟನಿ ಸಂಸ್ಥೆಯ ಫಾ. ಜಾನ್ ಸಾಸ್ತಾನ, ಮಾನವ ಹಕ್ಕುಗಳ ಸುನಿಲ್, ವೈ ಗಂಗಾದರ್ ಸುವರ್ಣ, ಸೇನೆಯಿಂದ ನಿವೃತ್ತರಾದ ದಿವಾಕರ ದೇವಾಡಿಗ ಅವರು ವ್ಯವಸ್ಥೆಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ತಮ್ಮ ಸಲಹೆಗಳನ್ನು ನೀಡಿದರು.

ಶಾಲಾ ವಾಹನಗಳಿಗೆ ಹಳದಿ ಬಣ್ಣ ಹಾಗೂ ಆಂಬುಲೆನ್ಸ್ ಗೆ ದಾರಿ ನೀಡುವಂತೆ ಶಾಲಾ ವಾಹನಗಳಿಗೆ ದಾರಿ ಬಿಡುವಂತೆ ಜಾಗೃತಿ ಮೂಡಿಸಬೇಕೆಂದು ಜೆರಾಲ್ಡ್ ಕ್ರಾಸ್ತಾ ಹೇಳಿದರು. ಬೆಳ್ತಂಗಡಿಯ ಶ್ರೀಧರ್ ರಾವ್ ಅವರು ಮಕ್ಕಳ ಸಹಾಯವಾಣಿಗೆ ಬೇಡಿಕೆ ಮುಂದಿಟ್ಟರು. ಒಂದು ತಿಂಗಳೊಳಗೆ ಸಹಾಯವಾಣಿ ಆರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಜನಾರ್ಧನ ಭಂಡಾರ್‍ಕರ್, ರಘುಪತಿ ಭಟ್, ಡಾ ವಿಜಯೇಂದ್ರ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.

ಎಲ್ಲರ ಸಲಹೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪಸಾರಿಗೆ ಆಯುಕ್ತ ಎಸ್ ಬಿ ಸುರೇಂದ್ರಪ್ಪ ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version