ಮಗಳು ಮಾಡಿದ್ದು ಅಕ್ಷಮ್ಯ, ಆಕೆಗೆ ಬೇಲ್ ಕೂಡ ಕೊಡುವುದಿಲ್ಲ: ಅಮೂಲ್ಯ ತಂದೆ
ಚಿಕ್ಕಮಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ತಮ್ಮ ಮಗಳ ನಡೆ ಅಕ್ಷಮ್ಯ ಅಪರಾಧ. ಅವಳ ಕೈ-ಕಾಲು ಮುರಿಯಿರಿ, ಆಕೆಗೆ ಬೇಲ್ ಕೂಡ ಕೊಡುವುದಿಲ್ಲ ಎಂದು ಅಮೂಲ್ಯಳ ತಂದೆ ವೊಜಲ್ಡ್ ಹೇಳಿದ್ದಾರೆ.
ಸಿಎಎ ಹಾಗೂ ಎನ್ಸಿಆರ್ ವಿರೋಧಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಸುದ್ದಿಗೆ ಗ್ರಾಸವಾಗಿರುವ ಯುವತಿ ಅಮೂಲ್ಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಅಮೂಲ್ಯಳ ತಂದೆ ಕೂಡ ಅಮೂಲ್ಯ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ತ ಸುದ್ದಿವಾಹಿನಿಗಳಲ್ಲಿ ಅಮೂಲ್ಯಳ ಪಾಕ್ ಪರ ಘೋಷಣೆ ಸುದ್ದಿಯಾಗುತ್ತಿದ್ದಂತೆಯೇ ಪುತ್ರಿಯ ದೇಶದ್ರೋಹಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವೊಜಲ್ಡ್ ಅವರು, ‘ನನ್ನ ಮಗಳು ಮಾಡಿದ್ದನ್ನು ಖಂಡಿತ ಒಪ್ಪಿಕೊಳ್ಳುವುದಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅಕ್ಷರಶಃ ತಪ್ಪು. ಮಗಳ ನಡೆಯನ್ನು ಎಂದಿಗೂ ಸಹಿಸುವುದಿಲ್ಲ. ಆಕೆ ಬೇಲ್ ಮೇಲೆ ಹೊರಗೆ ಬರುವುದು ಬೇಡ. ಆಕೆಗೆ ನಾನು ಬೇಲ್ ಕೂಡ ನೀಡುವುದಿಲ್ಲ. 6 ತಿಂಗಳು ಜೈಲಿನಲ್ಲೇ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ, ‘ನಾನು ಎಷ್ಟೇ ಬುದ್ಧಿವಾದ ಹೇಳಿದರೂ ಮಗಳು ಕೇಳುತ್ತಿರಲಿಲ್ಲ. ಕೆಲವರ ಜೊತೆ ಸೇರಿ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಳು. ಪೊಲೀಸರು ಆಕೆಯನ್ನು ಹೊರಗೆ ಬಿಡುವುದು ಬೇಡ. ನಾನು ಆಕೆಗೆ ಬೇಲ್ ಕೊಡಿಸುವುದಿಲ್ಲ, ಜೈಲಿನಲ್ಲೇ ಇರಲಿ. ಮಗಳ ಪರ ವಾದ ಮಾಡಲು ವಕೀಲರನ್ನು ನೇಮಕ ಮಾಡುವುದಿಲ್ಲ. ಸದ್ಯಕ್ಕೆ ಅವಳನ್ನು ಮನೆಗೂ ಸೇರಿಸುವುದಿಲ್ಲ. ಕಳೆದ ಐದು ದಿನಗಳಿಂದ ಮಗಳು ನನ್ನ ಜೊತೆ ಯಾವುದೇ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾರೆ.
‘ನಾನು ಹೃದಯಾಘಾತ ಸಮಸ್ಯೆ ಎದುರಿಸುತ್ತಿದ್ದು, ಆಸ್ಪತ್ರೆಗೆ ಹೋಗಬೇಕು. ಬೆಂಗಳೂರಿನಿಂದ ಬಾ ಅಂತ ಹೇಳಿದ್ದೆ. ಆದರೆ ಮಗಳು, ನನಗೆ ನಿನ್ನ ಜವಾಬ್ದಾರಿ ಇಲ್ಲ, ನಾನು ಬರುವುದಿಲ್ಲ. ನಿನ್ನ ಆರೋಗ್ಯ ಜವಾಬ್ದಾರಿ ನೀನೇ ನೋಡಿಕೋ ಎಂದಿದ್ದಳು. ಆಗ ನಾನು ಫೋನ್ ಕಟ್ ಮಾಡಿದೆ. ಆನಂತರ ನಾನು ಆಕೆಯನ್ನು ಸಂಪರ್ಕಿಸಿಲ್ಲ. ಮಗಳ ವಿರುದ್ಧ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿ. ಈ ವಿಚಾರದಲ್ಲಿ ನನ್ನದು ಏನೂ ಅಭ್ಯಂತರವಿಲ್ಲ ಎಂದು ಹೇಳಿದರು.
ಅಮೂಲ್ಯ ಮನೆಗೆ ಭಜರಂಗದಳ ಕಾರ್ಯಕರ್ತರ ಮುತ್ತಿಗೆ
ಇನ್ನು ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ ಬೆನ್ನಲ್ಲೇ ಆಕೆಯ ಚಿಕ್ಕಮಗಳೂರಿನ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ಭಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಬಳಿಕ ಅಮೂಲ್ಯ ತಂದೆ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರ ತಿಳಿದ ಕೂಡಲೆ ಕೊಪ್ಪ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಮೂಲ್ಯ ತಂದೆ ಕೆಲ ವರ್ಷಗಳ ಹಿಂದೆ ಮಲೆನಾಡಿನಲ್ಲಿ ನಡೆದ ಅಪ್ಪಿಕೊ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.