Home Mangalorean News Kannada News ಮಟ್ಕಾ ದೊರೆ ಲಿಯೋ ಕರ್ನೆಲಿಯೋ ಬಗ್ಗೆ ಮಾಹಿತಿ ನೀಡಿ ನಗದು ಬಹುಮಾನ ಪಡೆಯಿರಿ; ಸಂಜೀವ್...

ಮಟ್ಕಾ ದೊರೆ ಲಿಯೋ ಕರ್ನೆಲಿಯೋ ಬಗ್ಗೆ ಮಾಹಿತಿ ನೀಡಿ ನಗದು ಬಹುಮಾನ ಪಡೆಯಿರಿ; ಸಂಜೀವ್ ಪಾಟೀಲ್

Spread the love

ಮಟ್ಕಾ ದೊರೆ ಲಿಯೋ ಕರ್ನೆಲಿಯೋ ಬಗ್ಗೆ  ಮಾಹಿತಿ ನೀಡಿ ನಗದು ಬಹುಮಾನ ಪಡೆಯಿರಿ; ಸಂಜೀವ್ ಪಾಟೀಲ್

ಉಡುಪಿ: ಜಿಲ್ಲೆಯಲ್ಲಿ ಮಟ್ಕಾ ಚಟುವಟಿಕೆಯನ್ನು ಸಂಪೂರ್ಣ ಮಟ್ಟ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಿಲಿದ್ದು ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿದ್ದು ಮಟ್ಕಾ ಕಿಂಗ್ ಪಿನ್ ಲಿಯೋ ಕರ್ನೆಲಿಯೊ ಎನ್ನುವ ವ್ಯಕ್ತಿ ಪೋಲಿಸರಿಂದ ತಲೆಮರೆಸಿಕೊಂಡಿದ್ದು ಆತನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ ಅವರುಗಳ ಹೆಸರನ್ನು ಗೌಪ್ಯವಾಗಿಡುವುದಲ್ಲದೆ ವಿಶೇಷ ಬಹುಮಾನವನ್ನು ಜಿಲ್ಲಾ ಪೋಲಿಸ್ ವತಿಯಿಂದ ನೀಡಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿದ್ದಾರೆ,

ಅವರು ಶನಿವಾರ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಈಗಾಗಲೇ ಮೂರು ತಿಂಗಳ ಅವಧಿಯಲ್ಲಿ ನೂರಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು ಬಂಧಿಸಲ್ಪಟ್ಟ ಹೆಚ್ಚಿನ ಆರೋಪಿಗಳು ತಮ್ಮ ಕಿಂಗ್ ಪಿನ್ ಲಿಯೋ ಕರ್ನೆಲಿಯೋ ಎಂದು ಹೇಳಿದ್ದು ಆತನ ಪತ್ತೆಯನ್ನು ಮಾಡುವ ಸಲುವಾಗಿ ಇಲಾಖೆ ಪ್ರಯತ್ನಿಸುತ್ತಿದೆ. ಸಾರ್ವಜನಿಕರಿಗೆ ಆತನ ಬಗ್ಗೆ ಮಾಹಿತಿ ಇದ್ದಲ್ಲಿ ತನಗೆ ವೈಯುಕ್ತಿಕವಾಗಿ ಮಾಹಿತಿಯನ್ನು ನೀಡಬಹುದು ಎಂದರು. ಅಲ್ಲದೆ ಆತನ ವಿರುದ್ದ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ ಎಂದರು.

ನಾಗರಿಕರು ತಮ್ಮ ಸುತ್ತಮುತ್ತ ವಿದೇಶದಲ್ಲಿ ಉದ್ಯೋಗ ಕೊಡಿಸುವ ಏಜೆಂಟರು ಅಥನಾ ಸಂಸ್ಥೆಗಳಿದ್ದಲ್ಲಿ ಅವರು ಸರ್ಕಾರದ ವಿದೇಶಾಂಗ ವ್ಯವಹಾರ ಇಲಾಖೆಯಲ್ಲಿ ನೋಂದಾಯಿತರಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು, ನೊಂದಾಯಿತರಾಗದೇ ವ್ಯವಹರಿಸುತ್ತಿದ್ದಲ್ಲಿ ಅದು ಅಪರಾಧವಾಗಿದ್ದು, ಈ ಬಗ್ಗೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಲಹೆ ಮಾಡಿದರು.

 ಸೌದಿ ಅರೇಬಿಯಾ ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ರಾಜ್ಯ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದು, ನೋಂದಾಯಿತರಲ್ಲದ ಏಜೆಂಟರ ಮೂಲಕ ಸೌದಿಯಲ್ಲಿ ಉದ್ಯೋಗ ಪಡೆದುಕೊಂಡು ಮೋಸ ಹೋಗುತ್ತಿರುವವರ ಬಗ್ಗೆ ಎಚ್ಚರಿಕೆ ನೀಡಿದ್ದು, ಇದರಿಂದ ಸೌದಿ ಅರೇಬಿಯಾಕ್ಕೂ ಮತ್ತು ಭಾರತಕ್ಕೂ ಕಳಂಕ ತಟ್ಟುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

 ನೋಂದಾಯಿತ ಏಜೆಂಟರ ಮೂಲಕ ಸೌದಿಯಲ್ಲಿ ಉದ್ಯೋಗ ಪಡೆಯುವವರು 2 ವರ್ಷಗಳ ಅವಧಿಗೆ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಸಂಸ್ಥೆಗೆ ಕಟ್ಟುವ ಹಣವನ್ನು 2 ವರ್ಷಗಳ ಉದ್ಯೋಗ ಮುಗಿದಿ ಹಿಂದಕ್ಕೆ ಹೋಗುವಾಗ ಹಿಂದಕ್ಕೆ ನೀಡಲಾಗುತ್ತದೆ. ಆದರೇ ನೊಂದಾಯಿತರಲ್ಲದ ಏಜೆಂಟರು ನಿಗಧಿಗಿಂತ ಹೆಚ್ಚು ಹಣವನ್ನು ಪಡೆದು ಹಿಂದಕ್ಕೆ ನೀಡದೇ ಮೋಸ ಮಾಡುತ್ತಾರೆ, ಕಾನೂನಿನಿಂದಲೂ ತೊಂದರೆಗೊಳಗಾಗುತ್ತಾರೆ ಎಂದು ಈ ಪತ್ರದಲ್ಲಿ ಎಚ್ಚರಿಸಲಾಗಿದೆ.

 ಇಂತಹ ಏಜೆಂಟರ ಬಗ್ಗೆ ರಾಜ್ಯದಲ್ಲಿಯೇ ಕ್ರಮ ಕೈಗೊಳ್ಳುವಂತೆ ರಾಯಭಾರಿ ಕಚೇರಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ. ಸರ್ಕಾರವು ಈ ಪತ್ರವನ್ನು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಅದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರು ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಇಂತಹ ನೊಂದಾಯಿತರಲ್ಲದ ಏಜೆಂಟರ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಉಡುಪಿ ಸಿಟಿ ಹಾಗೂ ಸರ್ವಿಸ್ ಬಸ್ ಗಳು ನಿಲ್ದಾಣದಿಂದ ಹೊರಟು ಮುಂದಿನ ನಿಲ್ದಾಣದ ಮಧ್ಯೆ ಅನೇಕ ಕಡೆ ನಿಲುಗಡೆ ಕೊಡುತ್ತಿದ್ದು, ಟ್ರಾಫಿಕ್ ಜಾಮ್ಗೆ ಕಾರಣ ವಾಗುತ್ತಿದೆ ಎಂದು ನಾಗರಿಕರು ಕರೆ ಮಾಡಿ ತಿಳಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪಡುಬಿದ್ರಿ ಟೋಲ್ಗೇಟ್‍ನಲ್ಲಿ ಎಲ್ಲಾ ದ್ವಾರಗಳನ್ನು ತೆರೆಯದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ಸ್ಥಳೀಯ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಎಸ್ಪಿ ಸೂಚಿಸಿದರು.

ಬ್ರಹ್ಮಾವರರದಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಕೆಲವೆಡೆ ಡಿಜೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಎಸ್ಪಿ ಸೂಚಿಸಿದರು.

ಹೆಬ್ರಿಯಲ್ಲಿ ಸಹಕಾರಿ ಬ್ಯಾಂಕ್ನಲ್ಲಿ ಮಹಿಳೆಯೊಬ್ಬರು ಸಾಲಕ್ಕೆ ಜಾಮೀನು ನೀಡಿದ ಕಾರಣ ಹಾಲು ಮಾರಿ ಬಂದ ಹಣವನ್ನು ಖಾತೆಯಿಂದ ತೆಗೆಯಲು ಬಿಡುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಠಾಣೆಗೆ ದೂರು ನೀಡುವಂತೆ ಎಸ್ಪಿ ಸೂಚಿಸಿದರು.

ಕಲ್ಯಾಣಪುರ ಸಂತೆ ಸಂದರ್ಭ ಟ್ರಾಫಿಕ್ ಜಾಮ್ ಅಗುತ್ತಿರುವ ಬಗ್ಗೆ, ವಂಡ್ಸೆಯಲ್ಲಿ ರಸ್ತೆಯಲ್ಲೇ ಪಾರ್ಕ ಮಾಡುತ್ತಿರುವ ಬಗ್ಗೆ, ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ರಸ್ತೇಯಲ್ಲೆ ಕಾರ್ ಪಾರ್ಕ್ ಮಾಡುತ್ತಿರುವ ಬಗ್ಗೆ, ಬುಲೆಟ್‍ಗಳ ಕರ್ಕಶ ಧ್ವನಿಯ ಬಗ್ಗೆ, ಮುಳ್ಳುಕಟ್ಟೆಯಲ್ಲಿ ಸರಕಾರಿ ಭೂಮಿಯಲ್ಲೆ ಮಣ್ಣು ತೆಗೆಯುವ ಬಗ್ಗೆ, ಹೆಜಮಾಡಿ, ಶಂಕರನಾರಾಯಣ ವ್ಯಾಪ್ತಿಯಲ್ಲಿ ಆಕ್ರಮ ಮರಳು ತೆಗೆಯುವ ಬಗ್ಗೆ ದೂರುಗಳು ಸಲ್ಲಿಕೆಯಾದವು.

ಕಳೆದ ಒಂದು ವಾರದ ಅವಧಿಯಲ್ಲಿ ಒಟ್ಟು 3 ಮಟ್ಕಾ ಪ್ರಕರಣಗಳಲ್ಲಿ 3 ಮಂದಿಯನ್ನು ಬಂಧಿಸಿದ್ದು, 4 ಇಸ್ಪೀಟು ಪ್ರಕರಣಗಳಲ್ಲಿ 14 ಮಂದಿಯನ್ನು ಬಂಧಿಸಲಾಗಿದೆ. 2 ಮಾದಕ ವಸ್ತು ಪ್ರಕರಣದಲ್ಲಿ 2 ಬಂಧಿಸಿದ್ದು, 99 ಕೋಟ್ಪಾ ಪ್ರಕರಣ, 21 ಕುಡಿದು ವಾಹನ ಚಲಾವಣೆ, 138 ಕರ್ಕಶ ಹಾರ್ನ್, 905 ಹೆಲ್ಮೇಟ್ ರಹಿತ ಚಲಾವಣೆ ಸಂಬಧೀತ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.


Spread the love

Exit mobile version