ಮಣಿಪಾಲ:- ಜಿಲ್ಲೆಯಲ್ಲಿರುವ ಕೊರಗ ಸಮುದಾಯದ ಮಕ್ಕಳ ಶಿಕ್ಷಣ ಮೇಲ್ವಿಚಾರಣೆಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್ ಹೇಳಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೊರಗ ಸಮುದಾಯದ ಆರೋಗ್ಯ ಮತ್ತು ಶಿಕ್ಷಣ ಪ್ರಗತಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾಸವಿರುವ ಕೊರಗ ಸಮುದಾಯದ ತಲಾ 2 ಗ್ರಾಮಗಳಲ್ಲಿ ಈ ಕುರಿತು ಪ್ರಾಯೋಗಿಕವಾಗಿ ಶಿಕ್ಷಕರನ್ನು ನೇಮಕ ಮಾಡುವಂತೆ ಜಿಲ್ಲಾ ಐ.ಟಿ.ಡಿ.ಪಿ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಶಿಕ್ಷಕರು ಶಾಲೆಗೆ ಹೋಗುವ ಮಕ್ಕಳಿರುವ ಕೊರಗ ಕುಟುಂಬಗಳಿಗೆ ಪ್ರತಿ ದಿನ ಬೆಳಗ್ಗೆ ಭೇಟಿ ನೀಡಿ, ಮಕ್ಕಳು ಶಾಲೆಗೆ ಹೋಗುವಂತೆ ಪ್ರೋತ್ಸಾಹಿಸುವುದು ಮತ್ತು ಸಂಜೆಯ ವೇಳೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿನ 2600 ಕೊರಗ ಕುಟುಂಬಗಳನ್ನು ಯಶಸ್ವಿನಿ ಯೋಜನೆಯಡಿ ಸೇರ್ಪಡೆ ಮಾಡುವಂತೆ ಜಿಲ್ಲಾ ಐ.ಟಿ.ಡಿ.ಪಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಕೊರಗ ಸಮುದಾಯದ ಜನತೆ ವಾಜಪೇಯಿ ಆರೋಗ್ಯಶ್ರೀ ಯೋಜನೆ ಮತ್ತು ಬಿಪಿಎಲ್ ಪಡಿತರದಾರರಿಗೆ ಇರುವ ಉಚಿತ ಆರೋಗ್ಯ ಚಿಕಿತ್ಸೆಯ ಪ್ರಯೋಜನವನ್ನು ಪಡೆಯಬೇಕು ಹಾಗೂ ಈ ಆರೋಗ್ಯ ಯೋಜನೆಗಳು ಲಭ್ಯವಿರುವ ಕುರಿತ ಸಂಪೂರ್ಣ ಮಾಹಿತಿಯನ್ನು ಕರಪತ್ರಗಳಲ್ಲಿ ಮುದ್ರಿಸಿ ಎಲ್ಲಾ ಕೊರಗ ಕುಟುಂಬಗಳಿಗೆ ತಲುಪಿಸುವಂತೆ ಮತ್ತು ಈ ಕುರಿತು ಮೂರು ತಾಲೂಕುಗಳಲ್ಲಿ ಒಬ್ಬ ನೋಡಲ್ ಸಹಾಯಕರನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೊರಗ ಸಮುದಾಯದ ಜನರಿಗೆ ಅಗತ್ಯವಿರುವ ಔಷಧಿಗಳನ್ನು ಮತ್ತು ಅಗತ್ಯವಿರುವ ಕಡೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಂಬುಲೇನ್ಸ್ಗಳನ್ನು ಒದಗಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ , ಸಮುದಾಯದ ಆರೋಗ್ಯ, ಶಿಕ್ಷಣ ಹಾಗೂ ವಾಸಿಸುವ ಪರಿಸರ ಕುರಿತು ನಿಖರವಾದ ಸಮಗ್ರ ಸರ್ವೆ ನಡೆಸಿ ದೆಟಾಬೆಸ್ ಸಿದ್ಧಪಡಿಸಲಾಗುವುದು ಇದರಿಂದ ಈ ಸಮುದಾಯದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಐ.ಟಿ.ಡಿ.ಪಿ ಅಧಿಕಾರಿ ಪ್ರೇಮ್ ನಾಥ್ , ಡಿ.ಡಿ.ಪಿ.ಐ ದಿವಕರ್ ಶೆಟ್ಟಿ, ಆರೋಗ್ಯ ಇಲಾಖೆಯ ಡಾ| ರೋಹಿಣಿ , ಕೊರಗ ಮುಖಂಡರಾದ ಗಣೇಶ್ ಕೊರಗ ಮತ್ತಿತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂಭಾಶಿಯ ಆಶ್ರಮ ಶಾಲಾ ಮಕ್ಕಳಿಗೆ ವಿವಿಧ ಕ್ರೀಡೋಪಕರಣ ಶಾಲಾ ಬ್ಯಾಗ್ ಮತ್ತು ಹೊಸ ಬಟ್ಟೆಯನ್ನು ಜಿಲ್ಲಾಧಿಕಾರಿಗಳು ವಿತರಿಸಿದರು