Home Mangalorean News Kannada News ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ತೊಂದರೆ: ಪತ್ರಕರ್ತರ ಸಂಘದಿಂದ ಎಸ್ಪಿಗೆ ಮನವಿ

ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ತೊಂದರೆ: ಪತ್ರಕರ್ತರ ಸಂಘದಿಂದ ಎಸ್ಪಿಗೆ ಮನವಿ

Spread the love

ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ತೊಂದರೆ: ಪತ್ರಕರ್ತರ ಸಂಘದಿಂದ ಎಸ್ಪಿಗೆ ಮನವಿ

ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನ ಸಂದರ್ಭ ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಆಗಿರುವ ತೊಂದರೆ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮೇ 14ರಂದು ಮನವಿ ಸಲ್ಲಿಸಲಾಯಿತು.

ಎ.26ರಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತು ಮೇ 7ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, ಈ ಸಂದರ್ಭ ಮತಗಟ್ಟೆಗೆ ತೆರಳಿ ವಿಡಿಯೋ ಚಿತ್ರೀಕರಣ ಹಾಗೂ ಫೋಟೋಗ್ರಫಿ ಮಾಡಲು ಮಾಧ್ಯಮದವರಿಗೆ ಚುನಾವಣಾ ಆಯೋಗ ಪಾಸ್ ನೀಡಿದೆ. ಅದರಂತೆ ಸೀಮಿತ ಮತಗಟ್ಟೆಗಳಲ್ಲಿ ಸೆಲೆಬ್ರೆಟಿಗಳು ಮತದಾನ ಮಾಡುವ ಸಂದರ್ಭ ಕ್ಯಾಮೆರಾಮೆನ್‌ಗಳು ಹಾಗೂ ಫೋಟೋಗ್ರಫರ್‌ಗಳು ಚಿತ್ರೀಕರಣ/ಫೋಟೋ ತೆಗೆಯಲು ಮುಂದಾಗಿದ್ದು, ಈ ವೇಳೆ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮಾಧ್ಯಮದವರು ಚಿತ್ರೀಕರಣ ಮಾಡಲು ಅಡ್ಡಿ ಪಡಿಸಿದ್ದಾರೆ. ಇದರಿಂದ ನಮ್ಮ ಕರ್ತವ್ಯಕ್ಕೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಚುನಾವಣಾ ಆಯೋಗ ನೀಡಿದ ಪಾಸ್‌ನಲ್ಲಿ ಮತಗಟ್ಟೆ ಹೊರಗಡೆ ವಿಡಿಯೋ ಚಿತ್ರೀಕರಣ ಮಾಡಲು ಅವಕಾಶ ಕಲ್ಪಿಸಿದರೂ ಕೆಲವು ಪೊಲೀಸ್ ಅಧಿಕಾರಿಗಳು ನಮಗೆ ಅವಕಾಶ ಮಾಡಿದಕೊಡದಿರುವುದು ಸರಿಯಲ್ಲ. ಅದೇ ರೀತಿ ಇತರೆ ಮತಗಟ್ಟೆಗಳಲ್ಲಿಯೂ ಗ್ರಾಮೀಣ ಪ್ರದೇಶಗಳ ಪತ್ರಕರ್ತರಿಗೆ ಸರತಿ ಸಾಲಿನಲ್ಲಿ ನಿಂತ ಮತದಾರರ ಫೋಟೋ ತೆಗೆಯಲು ಕೂಡ ಅಧಿಕಾರಿಗಳು ಅವಕಾಶ ನೀಡಲಿಲ್ಲ. ತಾವು ಈ ಬಗ್ಗೆ ಪರಿಶೀಲಿಸಿ ಮುಂದೆ ಈ ರೀತಿ ಸಮಸ್ಯೆ ಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಜೂ.4ರಂದು ನಡೆಯುವ ಮತ ಎಣಿಕೆಗೆ ಸಂಬಂಧಿಸಿ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ.ಕೆ.ಅರುಣ್, ಈ ವಿಚಾರವನ್ನು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಮಾಹಿತಿ ನೀಡಬೇಕಾಗಿದ್ದು, ಮುಂದೆ ಈ ರೀತಿಯಾಗದಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಕಾರ್ಯದರ್ಶಿಗಳಾದ ರಹೀಂ ಉಜಿರೆ, ಪ್ರಮೋದ್ ಸುವರ್ಣ, ಮಾಜಿ ಅಧ್ಯಕ್ಷ ಜಯಕರ ಸುವರ್ಣ, ಕಮಿಟಿ ಸದಸ್ಯರಾದ ಮೈಕಲ್ ರೋಡ್ರಿಗಸ್, ಹರೀಶ್ ಕುಂದರ್, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ, ಪತ್ರಕರ್ತರಾದ ಶಶಿಧರ್ ಮಾಸ್ತಿಬೈಲು, ದೀಪಕ್ ಜೈನ್, ಪುಂಡಲೀಕ ಮರಾಠೆ, ಹರೀಶ್ ಪಾಲೇಚಾರ್, ಚೇತನ್ ಮಟಪಾಡಿ, ಪರೀಕ್ಷಿತ್ ಶೇಟ್, ಜಸ್ಟಿನ್ ಡಿಸಿಲ್ವ, ರಕ್ಷಿತ್ ಬೆಳಪು, ನಾಗರಾಜ್ ರಾವ್, ಅವಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು


Spread the love

Exit mobile version