Home Mangalorean News Kannada News ಮತದಾನ ಜಾಗೃತಿ: ಪಾಲಿಕೆಯೊಂದಿಗೆ ಕೈ ಜೋಡಿಸಿದ ಎಪಿಡಿ

ಮತದಾನ ಜಾಗೃತಿ: ಪಾಲಿಕೆಯೊಂದಿಗೆ ಕೈ ಜೋಡಿಸಿದ ಎಪಿಡಿ

Spread the love

ಮತದಾನ ಜಾಗೃತಿ: ಪಾಲಿಕೆಯೊಂದಿಗೆ ಕೈ ಜೋಡಿಸಿದ ಎಪಿಡಿ

ಮಂಗಳೂರು: ಮತದಾರ ಶಿಕ್ಷಣ ಮತ್ತು ಮತದಾರರ ಸಹಭಾಗಿತ್ವಕ್ಕೆ ಸಂಬಂಧಿಸಿದ ಚುನಾವಣಾ ಪೂರ್ವ ಕಾರ್ಯಕ್ರಮಗಳನ್ನು ಉತ್ತೇಜಿಸಲು ಎ.ಪಿ.ಡಿ. ಪ್ರತಿಷ್ಟಾನವು ಮಂಗಳೂರು ಮಹಾನಗರ ಪಾಲಿಕೆಯ ಜತೆ ಕೈ ಜೋಡಿಸಿದೆ.

ಭಾರತದ ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಎ.ಪಿ.ಡಿ. ಪ್ರತಿಷ್ಟಾನವು ಮಂಗಳೂರು ಮಹಾನಗರ ಪಾಲಿಕೆಯ ಅಧಿಕೃತ ಸ್ವಯಂಸೇವಾ ಸಂಘಟನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಮಂಗಳೂರು ಮಹಾನಗರ ಪಾಲಿಕೆಯ ಜತೆಗಿನ ಧೀರ್ಘಕಾಲೀನ ಸಹಭಾಗಿತ್ವ ಮತ್ತು ಪಾಲಿಕೆ ಎದುರಿಸುತ್ತಿರುವ ಕಸ ವಿಂಗಡಣೆ ಹಾಗು ನಗರ ಸೌಂದರೀಕರಣ ಕ್ಷೇತ್ರದಲ್ಲಿ ಮಾಹಿತಿ, ಶಿಕ್ಷಣ, ಹಾಗು ಸಂಪರ್ಕ (ಐ.ಇ.ಸಿ.) ವನ್ನು ಕಾರ್ಯಸಾಧ್ಯಗೊಳಿಸಿದ ಯಶೋಗಾಥೆಯ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವಕ್ಕೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿಯ ಈ ಪ್ರತಿಷ್ಟಿತ ಕೆಲಸ ಎ.ಪಿ.ಡಿ.ಗೆ ದೊರಕಿದೆ.

ಎ.ಪಿ.ಡಿ.ಯ ಜಾಗೃತಿ ಕಾರ್ಯಕ್ರಮಗಳು “ನಿಮ್ಮ ಬೆರಳಿಗೆ ಶಾಯಿ” ಶೀರ್ಷಿಕೆಯಡಿ ಆಯೋಜನೆಯಾಗುತ್ತದೆ ಮತ್ತು ಅವುಗಳನ್ನು ಕರ್ನಾಟಕ ವಿಧಾನಸಭಾ ಕ್ಷೇತ್ರ 202 (ಮಂಗಳೂರು ನಗರ ಉತ್ತರ) ಹಾಗು 203 (ಮಂಗಳೂರು ನಗರ ದಕ್ಷಿಣ) ರಲ್ಲಿಯ ಮತದಾರರನ್ನು ತಲುಪುವಂತೆ ವಿನ್ಯಾಸಗೊಳಿಸಲಾಗಿದೆ. ಎ.ಪಿ.ಡಿ.ಯು ದಕ್ಷಿಣ ಕನ್ನಡ ಸ್ವೀಪ್ ಸಮಿತಿ ಮತ್ತು ಮಂಗಳೂರು ನಗರ ಪಾಲಿಕೆಗಳ ಮಾರ್ಗದರ್ಶಿ ಸೂತ್ರಗಳ ಅನ್ವಯ ಕಾರ್ಯಕ್ರಮಗಳನ್ನು ಅನುಷ್ಟಾನಿಸುತ್ತದೆ.

ಸ್ವೀಪ್ ಕಾರ್ಯಕ್ರಮಗಳನ್ನು ಭಾರತದ ಚುನಾವಣಾ ಆಯೋಗವು ಮತದಾರರ ಸಹಭಾಗಿತ್ವವನ್ನು ಹೆಚ್ಚಿಸುವುದಕ್ಕಾಗಿ ಮತ್ತು ಭಾರತವನ್ನು ಉತ್ಸಾಹ ಭರಿತ ಪ್ರಜಾಪ್ರಭುತ್ವವನ್ನಾಗಿ ರೂಪಿಸಲು ಆರಂಭಿಸಿದೆ. ಮತದಾನದಲ್ಲಿ ಸರಾಸರಿ ಶೇ.60 ಮತದಾರರು ಮಾತ್ರವೇ ಮತ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಯಿತು. ಮತದಾನದಿಂದ ಹೊರಗುಳಿಯುವವರ ಸಂಖ್ಯೆಯನ್ನು ತಗ್ಗಿಸುವುದು ಮತ್ತು ಮತದಾರರಲ್ಲಿಯ ನಿರ್ಲಕ್ಷ್ಯದಿಂದ ಉದ್ಭವಿಸುವ ಸಮಸ್ಯೆಗಳಾದ ಅನರ್ಹಗೊಳ್ಳುವ ಮತಗಳು, ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳದಿರುವುದು ಇತ್ಯಾದಿಗಳನ್ನು ತೊಡೆದು ಹಾಕುವುದು ಸ್ವೀಪ್ ಗುರಿಯಾಗಿದೆ.

`ನಿಮ್ಮ ಬೆರಳಿಗೆ ಶಾಯಿ” ಕಾರ್ಯಕ್ರಮವು ಹೇಗೆ ಮತದಾನ ಮಾಡಬೇಕು, ಮತಗಟ್ಟೆಗಳ ಅವಧಿ, ಅವುಗಳು ಇರುವ ಸ್ಥಳ ಇತ್ಯಾದಿ ವಿಷಯಗಳ ಬಗ್ಗೆ ಮತದಾರರನ್ನು ಸುಶಿಕ್ಷಿತರನ್ನಾಗಿಸಲಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರಿಕರ ಪವಿತ್ರ ಕರ್ತವ್ಯ ಎಂಬ ಸಂವೇದನೆಯನ್ನು ಮೂಡಿಸುವುದು ಮತ್ತು ಮಂಗಳೂರು ಮಹಾನಾರ ಪಾಲಿಕೆಯ ಮತದಾರರನ್ನು ಕ್ರಿಯಾಶೀಲಗೊಳಿಸುವ ಕ್ರಮಗಳಿಗೆ ಸಮುದಾಯದ ಬೆಂಬಲವನ್ನು ಒದಗಿಸುವುದು ಇದರ ಉದ್ದೇಶಗಳಲ್ಲಿ ಸೇರಿದೆ. ಎಪಿಡಿಯೊಂದಿಗೆ ಇಂಟರ್ನ್ ಮಾಡುತ್ತಿರುವ ಬೆಂಗಳೂರಿನ ಇಎಫ್‍ಐಎಂ ಬಿಸಿನೆಸ್ ಸ್ಕೂಲಿನಲ್ಲಿ ಪಿಜಿಡಿಎಂ ಅನುಸರಿಸುವ 13 ಸ್ನಾತಕೋತ್ತರ ವಿದ್ಯಾರ್ಥಿಗಳು ಇಂಕ್ ಯುವರ್ ಫಿಂಗರ್ ಪ್ರಚಾರವನ್ನು ನಿರ್ವಹಿಸುತ್ತಿದ್ದಾರೆ. “ನೀವು ಬೆರಳು ತೋರಿಸಬೇಡಿ – ನಿಮ್ಮ ಬೆರಳಿಗೆ ಶಾಯಿ ಹಾಕಿ” ಎಂಬುದು ಈ ಪ್ರಚಾರಾಂದೋಲನದ ಘೋಷಣೆಯಾಗಿದೆ.

ಈ ಕಾರ್ಯಕ್ರಮವು ಎರಡು ಅಂಶಗಳನ್ನು ಒಳಗೊಂಡಿದೆ. ಒಂದನೇಯದ್ದು- “ಸಾರ್ವಜನಿಕ ಶಿಕ್ಷಣ” ಮತ್ತು ಎರಡನೇಯದ್ದು “ಸಮುದಾಯದ ಭಾಗವಹಿಸುವಿಕೆ”. ಆ ಮೂಲಕ ಒಂದಿಡೀ ತಿಂಗಳು ಕಾಲ ಸರಣಿ ಕಾರ್ಯಕ್ರಮಗಳು ಆಯೋಜನೆಯಾಗಿದ್ದು, ವಸತಿ ಪ್ರದೇಶಗಳು, ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳು, ಮಾಲ್ ಗಳು ಮತ್ತು ವಾಣಿಜ್ಯ ಸಂಸ್ಥೆಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಆವರಣಗಳು, ಸರಕಾರಿ ಕಚೇರಿಗಳು, ಮಾರುಕಟ್ಟೆ/ ಚೌಲ್ಟ್ರಿಗಳು, ಸಭಾಂಗಣಗಳು, ಮದುವೆ ಛತ್ರಗಳು, ಉದ್ಯಾನವನಗಳು, ಕಡಲಕಿನಾರೆಗಳು ಮತ್ತು ಇತರ ಮನರಂಜನಾ ತಾಣಗಳು ಇತ್ಯಾದಿ ಪ್ರದೇಶಗಳಲ್ಲಿ ನಡೆಸಲ್ಪಡುತ್ತವೆ. ಮಹಾನಗರ ಪಾಲಿಕೆಯಲ್ಲಿ ಲಭ್ಯ ಇರುವ, ಈ ಹಿಂದೆ ನಡೆದ ಚುನಾವಣೆಗಳಲ್ಲಿ ಮತದಾರರ ಸಹಭಾಗಿತ್ವ ಕುರಿತ ಅಂಕಿಅಂಶಗಳನ್ನು ಒಳಗೊಂಡ ದತ್ತಾಂಶಗಳು ಪ್ರಚಾರ ಅಭಿಯಾನವನ್ನು ಸುಸೂತ್ರವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿವೆ.

ಈ ಪ್ರಚಾರಾಂದೋಲನ ವ್ಯಾಪಕ ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ರೋಡ್ ಶೋ ಮತ್ತು ಇತರ ಸಮೂಹ ಮಾಧ್ಯಮಗಳನ್ನು ಇದರಲ್ಲಿ ಬಳಸಿಕೊಳ್ಳಲಾಗುತದೆ. ಈ ನಿಟ್ಟಿನಲ್ಲಿ ಎ.ಪಿ.ಡಿ.ಯು ಕ್ರಿಯಾ ಯೋಜನೆಯನ್ನು ರೂಪಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸಿದೆ. “ನಿಮ್ಮ ಬೆರಳಿಗೆ ಶಾಯಿ” ಅಭಿಯಾನ 2018 ಎಪಿಡಿ ಚಾಲನೆ ನೀಡಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 0824-4270008 (ಎ.ಪಿ.ಡಿ. ಕಚೇರಿ.)


Spread the love

Exit mobile version