ಮತಿಭ್ರಮಣೆಯಾದವರಂತೆ ಹೇಳಿಕೆ ನೀಡುತ್ತಿರುವ ಶಾಸಕ ಭರತ್ ಶೆಟ್ಟಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ : ಸೊರಕೆ
ಉಡುಪಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಬಿ. ಜೆ.ಪಿ ಯವರ ಹಿಂಸಾಪ್ರವೃತ್ತಿಯ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿರುವುದು ಹಿಂಸೆ ಮತ್ತು ಕೋಮುದ್ವೇಷವನ್ನೇ ಬಂಡವಾಳ ವಾಗಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿ.ಜೆ.ಪಿಗರಿಗೆ ಬರ ಸಿಡಿಲು ಬಡಿದಂತಾಗಿದೆ ಎಂದು ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ
ಸರ್ವಾಧಿಕಾರಿ ಧೋರಣೆಯ ಆಡಳಿತಕ್ಕೆ ಪ್ರಜ್ಞಾವಂತ ಮತದಾರರು ಕಡಿವಾಣ ಹಾಕುವ ಮೂಲಕ ಸಂವಿಧಾನದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ . ಸಂವಿಧಾನ ವನ್ನೇ ಬದಲಾಯಿಸುತ್ತೇವೆ ಎನ್ನುತ್ತಿದ್ದವರ ಮೇಲೆ ಎರಗಿದ ಸಂವಿಧಾನವೆಂಬ ಸಿಡಿಲಿನ ಆಘಾತಕ್ಕೆ ಬಿ. ಜೆ.ಪಿ ತತ್ತರಿಸಿ ಹೋಗಿದೆ. ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಗೌರವಯುತ ವಿಪಕ್ಷ ನಾಯಕನ ಸ್ಥಾನಮಾನವನ್ನು ಅಲಂಕರಿಸಿರುವ ರಾಹುಲ್ ಗಾಂಧಿಗೆ ಸಂಸತ್ತಿನ ಒಳಗೆ ನುಗ್ಗಿ ಕೆನ್ನೆ ಬಾರಿಸಬೇಕೆಂದು ಹೇಳಿಕೆ ನೀಡುವ ಮೂಲಕ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ಪುರಾವೆ ದೊರೆತಂತಾಗಿದೆ.
ಒಬ್ಬ ವೈದ್ಯನೆಂದು ಹೇಳಿಕೊಂಡು ಅವಿದ್ಯಾವಂತನತೆ ವರ್ತಿಸುತ್ತಿರುವ ಮತ್ತು ಹೇಳಿಕೆ ನೀಡುತ್ತಿರುವ ಭರತ್ ಶೆಟ್ಟಿಗೆ ಮತಿಭ್ರಮಣೆ ಯಾಗಿದ್ದು ತುರ್ತಾಗಿ ಸೂಕ್ತ ಮನೋಚಿಕಿತ್ಸೆಯ ಅಗತ್ಯವಿರುವಂತೆ ಕಾಣುತ್ತಿದೆ. ಅಹಿಂಸೆ, ಸಹಿಷ್ಣುತೆ ಮತ್ತು ಸಮತೆಯ ಮೂಲ ನಿಲುವನ್ನು ಹೊಂದಿರುವ ಹಿಂದೂ ಅಸ್ಮಿತೆಯನ್ನು ಪ್ರಖರವಾಗಿ ಸಂಸತ್ತಿನಲ್ಲಿ ಉಲ್ಲೇಖಿಸಿದ ರಾಹುಲ್ ಗಾಂಧಿಯ ವಿರುದ್ಧ ಬಿ. ಜೆ. ಪಿ ಗರು ಹತಾಶರಾಗಿ, ಹಲ್ಲೆ ನಡೆಸಲು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದು ತೀರಾ ಖಂಡನೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವು ಆಗಿದೆ
ಶಾಸಕ ಭರತ್ ಶೆಟ್ಟಿಯವರು ತಮ್ಮ ಬಾಲಿಶ ವರ್ತನೆ ಮತ್ತು ನೀಡುವಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ತಾನು ಶಾಸಕನಾಗಿರಲು ಯೋಗ್ಯನಲ್ಲವೆಂದು ರುಜುವಾತು ಪಡಿಸಿದ್ದಾರೆ ಇದೇ ರೀತಿಯ ಬೇಜವಾಬ್ದಾರಿ ಹೇಳಿಕೆ ಮತ್ತು ಹಿಂಸಾಪ್ರವೃತ್ತಿಯ ವರ್ತನೆಯನ್ನು ಮುಂದುವರಿಸಿದರೆ, ಭರತ್ ಶೆಟ್ಟಿಯವರಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಸದಾ ಸನ್ನದ್ಧರಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.