Home Mangalorean News Kannada News ಮತ್ಸ್ಯ ಸಂಪತ್ತು ಸಂರಕ್ಷಣೆಗೆ ನೂತನ ನೀತಿ- ಪ್ರಮೋದ್ ಮಧ್ವರಾಜ್

ಮತ್ಸ್ಯ ಸಂಪತ್ತು ಸಂರಕ್ಷಣೆಗೆ ನೂತನ ನೀತಿ- ಪ್ರಮೋದ್ ಮಧ್ವರಾಜ್

Spread the love

ಮತ್ಸ್ಯ ಸಂಪತ್ತು ಸಂರಕ್ಷಣೆಗೆ ನೂತನ ನೀತಿ- ಪ್ರಮೋದ್ ಮಧ್ವರಾಜ್

ಉಡುಪಿ: ಬಂದರುಗಳ ಮತ್ತು ಮೀನುಗಾರರ ಅಭಿವೃದ್ಧಿಯ ಜೊತೆಗೆ ಮತ್ಸ್ಯ ಸಂಪತ್ತಿನ ಸಂರಕ್ಷಣೆಯ ಹೊಣೆಯೂ ನಮ್ಮ ಮೇಲಿದೆ. ಈ ಕಾರಣಕ್ಕೆ ಮೀನುಗಾರಿಕಾ ನೀತಿಯನ್ನು ರಚಿಸಲಾಗುವುದು ಎಂದು ಮೀನುಗಾರಿಕೆ, ಯುವಜನಸಬಲೀಕರಣ ಮತ್ತು ಕ್ರೀಡಾ ಸಚಿವರು ಆಗಿರುವ ಪ್ರಮೋದ್ ಮಧ್ವರಾಜ್ ಹೇಳಿದರು.

ಮೀನು ಕ್ಷಾಮವನ್ನು ತಡೆಯಲು ಹಾಗೂ ಹೇರಳ ಮತ್ಸ್ಯ ಸಂಪತ್ತು ಲಭಿಸಲು ಪೂರಕವಾಗಿ ಸಮಗ್ರ ನೀತಿಯೊಂದನ್ನು ಜಾರಿಗೆ ತರಲು ಎಲ್ಲ ರಾಜ್ಯಗಳ ಮೀನುಗಾರಿಕೆಗೆ ಸಂಬಂಧಿಸಿದ ಮಂತ್ರಿಗಳು ಹಾಗೂ ಅಧಿಕಾರಿಗಳ ಶೃಂಗ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರಿಂದು ಕುಂದಾಪುರದ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕೇಂದ್ರ ಪುರಸ್ಕತ ಯೋಜನೆಯಡಿ 102. 11 ಕೋಟಿ ವೆಚ್ಚದಲ್ಲಿ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

jetti-inuguration-gangolli

ಮೀನುಗಾರರ ಪ್ರಮುಖ ಜೀವನಮಾರ್ಗವಾದ ಮತ್ಸ್ಯ ಸಂಪತ್ತು ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಯಾಗಿದ್ದು, ಮೀನುಗಾರಿಕೆ ಅಭಿವೃದ್ಧಿಗೆ ಸಮಗ್ರವಾದ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ; ಮೀನುಗಾರರ ಎಲ್ಲ ಸಮಸ್ಯೆಗಳು ಈಗಾಗಲೇ ಸರ್ಕಾರ ಸ್ಪಂದಿಸಿದ್ದು, ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಮತ್ತು ಬೇಡಿಕೆ ಅರ್ಜಿ ಸಲ್ಲಿಸಿದ ಎಲ್ಲ ಮೀನುಗಾರರಿಗೆ ಸಾಧ್ಯತಾ ಸರ್ಟಿಫಿಕೇಟ್‍ನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಮೀನುಗಾರರಿಗೆ ಕೊಟ್ಟ ಮಾತಿನಂತೆ ಅವರ ಬೇಡಿಕೆಗಳನ್ನು ಈಡೇರಿಸಿದ್ದು, ಶಂಕುಸ್ಥಾಪನೆಗೊಂಡ ಮೇಲಿನ ಕಾಮಗಾರಿಗೆ ಪ್ರಥಮ ಹಂತವಾಗಿ ನಾಲ್ಕು ಕೋಟಿ ರೂ.ಗಳನ್ನು ಒಂದು ವಾರದೊಳಗೆ ಬಿಡುಗಡೆ ಮಾಡುವ ಭರವಸೆಯನ್ನು ಸಚಿವರು ನೀಡಿದರು.
ಮಡಿಕಲ್ ಬಂದರು ಅಭಿವೃದ್ಧಿಗೆ ಹೊಸ ಯೋಜನಾ ವರದಿಯನ್ನು ಕ್ಯಾಬಿನೆಟ್ ನಲ್ಲಿ ಮಂಡಿಸಿ ಅನುಮೋದನೆಗೆ ಯತ್ನಿಸುವ ಶಾಸಕ ಗೋಪಾಲ ಪೂಜಾರಿಯವರ ಬೇಡಿಕೆಯನ್ನು ಈಡೇರಿಸುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೀನುಗಾರರಿಗೆ ನೆರವಾಗುವ ಯೋಜನೆಗಳನ್ನು ಅಧಿಕಾರಿಗಳು ಕಾಲಮಿತಿಯೊಳಗೆ ಮುಗಿಸಲು ಸೂಚನೆ ನೀಡಿದರು.

ಮೀನುಗಾರರ ಮುಖಂಡರಾದ ನಾಗಾ ಖಾರ್ವಿ, ಮಂಜು ಬಿಲ್ಲವ, ಪುರುಷೋತ್ತಮ ಆರ್ಕಾಟ್, ರಮೇಶ್ ಕುಂದರ್ ಇದ್ದರು. ಮೀನುಗಾರಿಕೆ ಇಲಾಖೆ ನಿರ್ದೇಶಕ ಹೆಚ್ ಎಸ್ ವೀರಪ್ಪ ಗೌಡ, ಜಂಟಿ ನಿರ್ದೇಶಕ ಗಣಪತಿ ಭಟ್, ಉಪನಿರ್ದೇಶಕರಾದ ಮಹೇಶ್ ಕುಮಾರ್, ಹಿರಿಯ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್. ಸಹಾಯಕ ನಿರ್ದೇಶಕರಾದ ಅಂಜನಾದೇವಿ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಇಂಜಿನಿಯರ್‍ಗಳಿದ್ದರು.

ಕೊಡೇರಿಯಲ್ಲಿ 33 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಗೆ ಸಚಿವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಹಿಸಿದ್ದರು. ಇಲ್ಲಿನ ನಾಡದೋಣಿ ಮೀನುಗಾರರ ಮುಖಂಡರಾದ ನವೀನ್ ಚಂದ್ರ ಅವರು, ಪ್ರಮುಖ ಮೂರು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.

ಸಚಿವರು ಸಭೆಯನ್ನುದ್ದೇಶಿಸಿ ಮಾತನಾಡಿ, ಬೈಂದೂರು ಕ್ಷೇತ್ರಕ್ಕೆ ಮತ್ಸ್ಯಾಶ್ರಯ ಯೋಜನೆಯಡಿ 190 ಮನೆಯನ್ನು ನೀಡುವುದಾಗಿ ಘೋಷಿಸಿದರು. ತಮ್ಮ ಜಿಲ್ಲೆಯಲ್ಲಿ ಬೇರಾವ ಕ್ಷೇತ್ರದಲ್ಲೂ 90 ಕ್ಕಿಂತ ಹೆಚ್ಚು ಮನೆ ನೀಡಿಲ್ಲ ಎಂದರಲ್ಲದೆ, ಸೀಮೆಎಣ್ಣೆ ನಾಳೆಯಿಂದ ದೊರಕಲಿದ್ದು, ಕಾಮಗಾರಿಯನ್ನು ಸಮಯಮಿತಿಯೊಳಗೆ ಗುಣಮಟ್ಟಕ್ಕೆ ರಾಜಿ ಇಲ್ಲದೆ ಗುತ್ತಿಗೆದಾರರು ನಡೆಸಿಕೊಡುವರು.

ಮೌತ್ ಡ್ರೆಜ್ಜಿಂಗ್ ಬಗ್ಗೆ ಮೀನುಗಾರ ಮುಖಂಡರು ಗಮನಸೆಳೆದಾಗ, ಸಭೆಯ ಬಳಿಕ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಿ ಮೀನುಗಾರರ ಬೇಡಿಕೆಗೆ ಸ್ಪಂದಿಸುವುದಾಗಿ ನುಡಿದರು.

ಶಾಸಕರಾದ ಗೋಪಾಲ ಪೂಜಾರಿ ಅವರು ಕೊಡೇರಿಯಲ್ಲಿ ಮಾತನಾಡಿ, 33 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವೇ ನೀಡಿದ್ದು, ಸಂಸದ ಆಸ್ಕರ್ ಫರ್ನಾಂಡಿಸ್ ಅವರು ಈ ನಿಟ್ಟಿನಲ್ಲಿ ನೆರವಾದುದಕ್ಕೆ ಕೃತಜ್ಞತೆ ಸಲ್ಲಿಸಿದರು. ಇದರ ಜೊತೆಗೆ ಕೊಡೇರಿ ರಸ್ತೆ ನಿರ್ಮಾಣಕ್ಕೂ ಟೆಂಡರ್ ಶೀಘ್ರವೇ ಆಗಲಿದೆ ಎಂಬುದನ್ನು ಘೋಷಿಸಿದರು. ಒಟ್ಟು ಸುಮಾರು 300 ಕೋಟಿಯ ಕಾಮಗಾರಿಗಳು ಬೈಂದೂರು ಕ್ಷೇತ್ರಕ್ಕೆ ಲಭ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಕಾಮಗಾರಿಯಲ್ಲಿ ಲೋಪಗಳಿದ್ದರೆ ಮೀನುಗಾರರು ನೇರವಾಗಿ ತಮ್ಮ ಗಮನಕ್ಕೆ ತರುವಂತೆಯೂ ಸೂಚಿಸಿದರು. ಈ ಸಮಾರಂಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಲಲಿತಾ ಖಾರ್ವಿ, ಉಪಾಧ್ಯಕ್ಷರಾದ ಶೇಖರ್ ಖಾರ್ವಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಶ್ಯಾಮಲ ಕುಂದರ್, ಕೆಡಿಪಿ ಸದಸ್ಯರಾದ ರಾಜು ಪೂಜಾರಿ, ಮೀನುಗಾರರ ಮುಖಂಡರಾದ ಮದನ್ ಕುಮಾರ್, ವಿಜಯಕುಮಾರ್ ಶೆಟ್ಟಿ, ರಾಜು ದೇವಾಡಿಗ, ಜಗದೀಶ್ ದೇವಾಡಿಗ, ತಹಸೀಲ್ದಾರ್ ಕಿರಣ್ ಹಾಗೂ ಮೀನುಗಾರಿಕೆ ಇಲಾಖೆ ಎಲ್ಲ ಅಧಿಕಾರಿಗಳಿದ್ದರು.

ಶಿರೂರು ಅಳಿವೆಗದ್ದೆ ಮೀನುಗಾರಿಕೆ ನೈಸರ್ಗಿಕ ಬಂದರಿನ 280 ಲಕ್ಷ ವೆಚ್ಚದ ಮೀನುಗಾರಿಕೆ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನೂ ಸಚಿವರು ಇಂದೇ ನೆರವೇರಿಸಿದರಲ್ಲದೆ, ಅವಘಡದಲ್ಲಿ ಮೃತಪಟ್ಟ ಮೀನುಗಾರರಿಗೆ ಪರಿಹಾರದ ಮೊತ್ತವನ್ನು ಐದು ಲಕ್ಷ ರೂ.ಗಳಿಗೆ ಏರಿಸಿರುವುದಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲ ಪೂಜಾರಿ ಅವರು ಮಾತನಾಡಿ, ಸಂಸದರ ಆದರ್ಶ ಗ್ರಾಮವನ್ನಾಗಿ ದೊಂಬೆಯನ್ನು ಆಸ್ಕರ್ ಫರ್ನಾಂಡಿಸ್ ಅವರು ಆಯ್ಕೆ ಮಾಡಿ ಸಮುದ್ರ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಿ ಗ್ರಾಮೀಣರಿಗೆ ಕುಡಿಯುವ ನೀರು ಪೂರೈಸುವುದಲ್ಲದೆ, ಸಮಗ್ರ ಅಭಿವೃದ್ಧಿಗೆ ಹಣ ಹರಿದುಬಂದು ದೊಂಬೆ, ಕಳಿಹಿತ್ಲು, ಅಳಿವೆಗದ್ದೆಗಳು ಸಮಗ್ರ ಅಭಿವೃದ್ಧಿ ಹೊಂದಲಿವೆ ಎಂದರು. ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಸುಧಾಕರ, ಗ್ರಾಮ ಪಂಚಾಯತ್ ಅಧ್ಯಕ್ಷ ದಿಲ್‍ಶಾದ್ ಬೇಗಂ, ಉಪಾಧ್ಯಕ್ಷ ನಾಗೇಶ್ ಮೊಗೇರ, ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಬಟವಾಡೆ, ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಮೌಲಾನ ದಸ್ತಗಿರಿ ಸಾಹೇಬ್ ಪಾಲ್ಗೊಂಡರು.


Spread the love

Exit mobile version