ಮದ್ಯದ ಕಿಕ್ಕ್ ; ಐಡಿಯಲ್ ಐಸ್ ಕ್ರೀಮ್ ಕಟ್ಟಡ ಏರಿ ರಾದ್ದಾಂತ ಸೃಷ್ಟಿಸಿದ ಯುವಕ
ಮಂಗಳೂರು: ಕುಡಿತದ ಅಮಲಿನಲ್ಲಿದ್ದ ಯುವಕನೋರ್ವ ನಗರದ ಹಂಪನಕಟ್ಟೆ ಬಳಿಯ ಐಡಿಯಲ್ ಐಸ್ಕ್ರೀಮ್ ಪಾರ್ಲರ್ ಕಟ್ಟಡ ಛಾವಣಿ ಏರಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಈತನ ರಾದ್ದಾಂತವನ್ನು ವೀಕ್ಷಿಸಿಲು ಸ್ಥಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು.
ಕಟ್ಟಡ ಏರಿದ ಯುವಕ ಬೇಕಲದ ಪಲಕನ್ನು ನಿವಾಸಿ ಫಾಯಿಮ್ ಸಲ್ಮಾನ್ (25) ವೃತ್ತಿಯಲ್ಲಿ ಕ್ಷೌರಿಕ ವ್ರತ್ತಿಯವನಾಗಿದ್ದು, ಬಟ್ಟೆ ಖರೀದಿಗಾಗಿ ನಗರಕ್ಕೆ ಆಗಮಿಸಿದ್ದನು. ಬಳಿಕ ಮದ್ಯ ಸೇವಿಸಿದ ಯುವಕ ಸಂಜೆ ಹೊತ್ತಿಗೆ ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಐಡಿಯಲ್ ಪಾರ್ಲರಿನ ಕಟ್ಟಡದ ಛಾವಣಿ ಏರಿ ಅತ್ತಿಂದಿತ್ತ ಸಂಚರಿಸಲು ತೊಡಗಿದನು. ಇದಲ್ಲದೆ ತಾನು ಛಾವಣಿಯಿಂದ ಕೆಳಗೆ ಜಿಗಿಯುವುದಾಗಿ ಸಾರ್ವಜನಿಕರಿಗೆ ಬೆದರಿಕೆ ಕೂಡ ಹಾಕುತ್ತಿದ್ದ. ಕೊನೆಗೂ ಸ್ಥಳೀಯ ನಾಗರಿಕರು ಪೋಲಿಸರಿಗೆ ಮಾಹಿತಿ ನೀಡಿದ್ದು, ಬಂದರು ಠಾಣಾ ಪೋಲಿಸರು ಸ್ಥಳಕ್ಕೆ ಧಾವಿಸಿ ಆತನನ್ನು ಕೆಳಗಿಳಿಯುವಂತೆ ಕೋರಿಕೊಂಡರೂ ಕೆಳಗೆ ಧುಮುಕುವ ಬೆದರಿಕೆ ಒಡ್ಡುತ್ತಲೇ ಇದ್ದನು.
ಇವನ ರಾದ್ಧಾಂತದಿಂದ ಪೋಲಿಸರು ಅಗ್ನಿಶಾಮಕ ದಳದವರನ್ನು ದೂರವಾಣಿ ಕರೆ ಮಾಡಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬಂದಿಗಳು ಯುವಕನನ್ನು ಕೆಳಗಿಳಿಸಲು ಕೋರಿಕೊಂಡರೂ ಒಪ್ಪದೆ ಕೆಳಗೆ ಹಾರುವ ಧಮಕಿ ಹಾಕುತ್ತಿದ್ದ.
ಕೊನೆಗೂ ಆತನಲ್ಲಿ ಮಾತನಾಡುತ್ತಾ ಅಗ್ನಿಶಾಮಕ ದಳದ ಸಿಬಂದಿಗಳು ಕಟ್ಟಡವನ್ನು ಏರಿ ಯುವಕನನ್ನು ಹಿಡಿದು ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಕುಡಕನ ರಾದ್ಧಾಂತಕ್ಕೆ ಬ್ರೇಕ್ ಹಾಕಲಾಯಿತು.