ಮಧುಕರ್ ಶೆಟ್ಟಿಯವರ ಸಾವಿನ ಸುದ್ದಿ ನನಗೆ ಆಘಾತ ತಂದಿದೆ: ಡಿಸಿಪಿ ಅಣ್ಣಾಮಲೈ
ಬೆಂಗಳೂರು: ಎಚ್1 ಎನ್1 ಸೋಂಕಿನಿಂದ ಬಳಲುತ್ತಿದ್ದ ಪ್ರಾಮಾಣಿಕ, ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ನಮ್ಮನ್ನಗಲಿದ್ದಾರೆ. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಆಗಿದ್ದ ಖಡಕ್ ಅಧಿಕಾರಿ ಸಾವಿಗೆ ಗಣ್ಯರು ಕಂಬನಿ ಮಿಡಿದ್ದಾರೆ. ಸಿಎಂ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ ಪರಮೇಶ್ವರ್ ಅವರು ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಪ್ರಾಮಾಣಿಕ ಅಧಿಕಾರಿಗಳ ಪೈಕಿ ಒಬ್ಬರಾದ ಕನ್ನಡದ ಸಿಂಗಂ, ಅಣ್ಣಾಮಲೈ ಕೂಡ ಮಧುಕರ್ ಶೆಟ್ಟಿ ಅವರ ಸಾವಿಗೆ ಕಣ್ಣೀರಾಕಿದ್ದಾರೆ.
ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಯವರ ಸಾವಿನ ಸುದ್ದಿ ನನಗೆ ಆಘಾತ ತಂದಿದೆ. ಅವರು ಭ್ರಷ್ಟರನ್ನ ಭೇಟಿಯಾಡುತ್ತಿದ್ದರು. ಎಲ್ಲಿಯೂ ಹಣದ ಆಮಿಷಕ್ಕೆ ಬಲಿಯಾಗಲಿಲ್ಲ. ಮಧುಕರ್ ಶೆಟ್ಟಿ ಒಬ್ಬ ಪ್ರಾಮಾಣಿಕ, ದಕ್ಷ ಅಧಿಕಾರಿ. ಚಿಕ್ಕಮಂಗಳೂರಿನಲ್ಲಿ ಅವರು ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ನಾಡಿನ ಜನತೆಗೆ ಅವರು ನೀಡಿದ ಕೊಡುಗೆ ಅಭೂತಪೂರ್ವ. ಈ ಐಪಿಎಸ್ ಅಧಿಕಾರಿಯ ದಕ್ಷತೆ ನಮಗೆ ನಿಜಕ್ಕೂ ಸ್ಪೂರ್ತಿ ಎಂದರು.
ಇನ್ನು ಡೈಲನ್ ಥಾಮಸ್ ಹೇಳಿದ್ದನ್ನ ನೆನೆದ ಅಣ್ಣಾಮಲೈ, Rage, rage against the dying of the light and do not go gentle into the good night” ಎಂದರು. ಇದೇ ಸಂದರ್ಭದಲ್ಲಿ ನೀವು ನಮ್ಮನ್ನ ಬಿಟ್ಟುಹೋದದ್ದು, ಭಾರೀ ನೋವು ತಂದಿದೆ. ನೀವು ಇಲ್ಲಿಂದ ಹಾಗೆಯೇ ಹೋಗಿಲ್ಲ. ನಮಗೆ ಒಂದಷ್ಟು ಪಾಠಗಳನ್ನು ಕಲಿಸಿ ಹೋಗಿದ್ದೀರಿ. ನಿಮ್ಮ ಹೋರಾಟದ ಮನೋಭಾವ, ದಕ್ಷತೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆಯನ್ನು ನಾವು ಮುಂದುವರೆಸುತ್ತೇವೆ. ನಿಮ್ಮ ಆಲೋಚನೆಗಳು, ಸಮಾಜ ಸೇವೆ ನಮಗೆ ಅಕ್ಷರಶಃ ಸ್ಪೂರ್ತಿ. ನೀವು ನಡೆದ ದಾರಿಯಲ್ಲೇ, ನಾವು ನಡೆಯುತ್ತೇವೆ. ನಿಮ್ಮ ರೀತಿಯಲ್ಲೇ ಯಾವುದಕ್ಕೂ ಹೆದರದೇ ಪ್ರಾಮಾಣಿಕವಾಗಿ ಮುನ್ನಡೆಯುತ್ತೇವೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಹೇಳಿದ್ದಾರೆ.