ಮನಪಾ ಚುನಾವಣೆ : ಆಯುಧ ಪರವಾನಿಗೆ, ಶಸ್ತ್ರಾಸ್ತ್ರಗಳ ತಾತ್ಕಾಲಿಕ ಠೇವಣಿಗೆ ಸೂಚನೆ

Spread the love

ಮನಪಾ ಚುನಾವಣೆ : ಆಯುಧ ಪರವಾನಿಗೆ, ಶಸ್ತ್ರಾಸ್ತ್ರಗಳ ತಾತ್ಕಾಲಿಕ ಠೇವಣಿಗೆ ಸೂಚನೆ

ಮಂಗಳೂರು : ರಾಜ್ಯ ಚುನಾವಣಾ ಆಯೋಗವು ಮಂಗಳೂರು ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆ 2019ನ್ನು ನಡೆಸಲು ವೇಳಾಪಟ್ಟಿಯನ್ನು ಹೊರಡಿಸಿದ್ದು, ನಗರದ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆತ್ಮ ರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಎಲ್ಲಾ ಆಯುಧ ಪರಾವನಿಗೆಗಳನ್ನು ಶಸ್ತ್ರಾಸ್ತ್ರ ಕಾಯ್ದೆ-1959 ಕಲಂ17(3)(ಬಿ)ರನ್ವಯ ತಾತ್ಕಾಲಿಕ ಅವಧಿಗೆ ಅಮಾನತಿನಲ್ಲಿರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಡಾ. ಪಿ.ಎಸ್ ಹರ್ಷ ಆದೇಶಿಸಿದ್ದಾರೆ.

ಆಯುಧ ಪರವಾನಿಗೆ ಹೊಂದಿರುವ ಪರವಾನೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಕೂಡಲೇ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಮದ್ದುಗುಂಡುಗಳ ವ್ಯಾಪಾರಸ್ಥರಲ್ಲಿ ಠೇವಣಿ ಇರಿಸಬೇಕು. ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಹಾಗೂ ತಾವು ಆತ್ಮ ರಕ್ಷಣೆಗಾಗಿ/ ಬೆಳೆ ರಕ್ಷಣೆಗಾಗಿ ಹೊಂದಿರುವ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಸೂಕ್ತ ಮಾಹಿತಿಗಳೊಂದಿಗೆ ಹಾಗೂ ಪೂರಕ ದಾಖಲೆಗಳೊಂದಿಗೆ ಈ ಆದೇಶ ಹೊರಡಿಸಿದ 1 ವಾರದೊಳಗೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳಿಗೆ ಅಹವಾಲು ಸಲ್ಲಿಸಬೇಕು.

ಅಮಾನತಿನ ಅವಧಿ ಮುಗಿದ ತಕ್ಷಣ ಆಯುಧ ಠೇವಣಿ ಪಡೆದ ಅಧಿಕಾರಿಗಳು/ ಅಧಿಕೃತ ಮದ್ದುಗುಂಡುಗಳ ವ್ಯಾಪಾರಸ್ಥರು ಅಂತಹ ಆಯುಧಗಳನ್ನು ಠೇವಣಿದಾರರಿಗೆ ಹಿಂದಿರುಗಿಸುವಂತೆಯೂ, ಪರವಾನಿಗೆದಾರರು ತಮ್ಮ ಆಯುಧಗಳನ್ನು ಮರು ಪಡೆದುಕೊಳ್ಳಬಹುದಾಗಿಯೂ ಆದೇಶಿಸಲಾಗಿದೆ.

ಆದೇಶವು ಅನ್ವಯಿಸದ ವರ್ಗಗಳ ವಿವರ :- ಕೇಂದ್ರ ಹಾಗೂ ರಾಜ್ಯ ಸರಕಾರ ಇಲಾಖೆ, ಸಾರ್ವಜನಿಕ ವಲಯ ಹಾಗೂ ಇತರ ಖಾಸಗಿ ವಲಯ, ಭದ್ರತೆಯ ಉದ್ದೇಶಕ್ಕಾಗಿ ವ್ಯವಸ್ಥಾಪಕರಿಗೆ ಅಗ್ನಿಶಾಮಕ ಪರವಾನಿಗೆಗಳನ್ನು ನೀಡಲಾಗಿದೆ. ವರ್ಗ-1 , ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೆಜೆಟೆಡ್ ಅಧಿಕಾರಿಗಳು, ವಿವಿಧ ಹಂತಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ರಾಷ್ಟ್ರೀಯ ರೈಫಲ್ ಸಂಘದ ಸದಸ್ಯರಾಗಿರುವ ಕ್ರೀಡಾಪಟುಗಳಿಗೆ ಆದೇಶ ಅನ್ವಯವಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ, ಪ್ರಕಟಣೆ ತಿಳಿಸಿದೆ.


Spread the love