ಮನಸ್ಸು ಪರಿವರ್ತನೆಯಿಂದ ಕ್ರಾಂತಿಕಾರಿ ಪ್ರಗತಿ ಸಾಧ್ಯ – ಪ್ರಭು ಚನ್ನಬಸವ ಸ್ವಾಮೀಜಿ
ಧರ್ಮಸ್ಥಳದಲ್ಲಿ ಶನಿವಾರ ಒಂದು ಸಾವಿರನೆ ಮದ್ಯವರ್ಜಿತರ ಸಮಾವೇಶವನ್ನು ಬೆಳಗಾವಿಯ ಅಥಣಿ ಮೊಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು.
ಜನರ ಮನಸ್ಸು ಪರಿವರ್ತನೆಯಿಂದ ಕ್ರಾಂತಿಕಾರಿ ಪ್ರಗತಿಯಾಗುತ್ತದೆ. ನಿಮ್ಮ ಏಳಿಗೆಗೆ ನೀವೇ ಶಿಲ್ಪಿಗಳಾಗಬೇಕು. ಅಭಿವೃದ್ಧಿಯ ಹರಿಕಾರರಾಗಬೇಕು ಎಂದು ಬೆಳಗಾವಿಯ ಅಥಣಿ ಮೊಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.
ಧರ್ಮಸ್ಥಳದಲ್ಲಿ ಶನಿವಾರ ಒಂದು ಸಾವಿರನೆ ಮದ್ಯವರ್ಜಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯದ ಕನಸು ಇಲ್ಲಿ ಹೆಗ್ಗಡೆಯವರ ನೇತೃತ್ವದಲ್ಲಿ ನನಸಾಗುತ್ತಿದೆ.
ದುಶ್ಚಟಗಳು ಇಡಿ ಬಾಳನ್ನೇ ಹಾಳು ಮಾಡುತ್ತವೆ. ಮದ್ಯಪಾನ ಮುಕ್ತರು ದೃಢ ಸಂಕಲ್ಪದಿಂದ ಸಾರ್ಥಕ ಜೀವನಕ್ಕೆ ಕಂಕಣ ಬದ್ಧರಾಗಬೇಕು. ಪ್ರತಿಯೊಂದು ಮನೆಯೂ, ಪ್ರತಿಯೊಬ್ಬರ ಮನವು ಧರ್ಮಸ್ಥಳವಾಗಿ ಎಲ್ಲರ ಬದುಕು ನಂದಾದೀಪದಂತೆ ಸದಾ ಬೆಳಗುತ್ತಿರಬೇಕು ಎಂದು ಅವರು ಹಾರೈಸಿದರು.
ಸಾವಿರನೇ ಶಿಬಿರ ದೇಶದ ಚರಿತ್ರೆಯಲ್ಲೇ ಸುವರ್ಣಾಕ್ಷರಗಳಿಂದ ಬರೆಯಬಹುದಾದ ವಿಚಾರ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಯುಶ್ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಮಾತನಾಡಿ ಮದ್ಯಪಾನದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾನಿಯಾಗಿ ಖಾಸಗಿ ಬದುಕು ಮತ್ತು ಕೌಟುಂಬಿಕ ಜೀವನ ನರಕಯಾತನೆಯಾಗುತ್ತದೆ. ವ್ಯಸನಮುಕ್ತ ಆರೋಗ್ಯ ಪೂರ್ಣ ಸಮಾಜ ರೂಪಿಸುವಲ್ಲಿ ಜನ ಜಾಗೃತಿ ವೇದಿಕೆಯ ಕಾರ್ಯಶ್ಲಾಘನೀಯವಾಗಿದೆ ಎಂದು ಅಭಿನಂದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಕಾನೂನಿನಡಿಯಲ್ಲಿ ಮದ್ಯಪಾನ ನಿಷೇಧ ಸಾಧ್ಯವಾಗುವುದಿಲ್ಲ. ವ್ಯಸನ ಮುಕ್ತ ಸಮಾಜ ರೂಪಿಸಲು ಹೆಗ್ಗಡೆಯವರು ಮಾಡುವ ಸೇವೆ ದೇವರು ಮೆಚ್ಚುವ ಕಾರ್ಯವಾಗಿದೆ ಎಂದರು.
ಬೆಂಗಳೂರಿನ ವ್ಯಾಸ ಯೋಗ ವಿ.ವಿ.ಯ ಡಾ. ಎಚ್. ಆರ್. ನಾಗೇಂದ್ರ ಮಾತನಾಡಿ, ಯೋಗದ ಮೂಲಕ ಮಧುಮೇಹ ಮುಕ್ತ ಕರ್ನಾಟಕ ರೂಪಿಸಲು ಉದ್ದೇಶಿಸಲಾಗಿದೆ. ಮನಸ್ಸಿನ ನಿಯಂತ್ರಣದಿಂದ ದುಶ್ಚಟಗಳನ್ನು ದೂರ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯಪಾನಿಗಳು ಪಾಪಿಗಳಲ್ಲ, ದುಷ್ಟರಲ್ಲ. ಸಂದರ್ಭೋಚಿತವಾಗಿ ಕೆಲವರು ಸಹವಾಸ ದೋಷದಿಂದ ದುಶ್ಚಟಕ್ಕೆ ಬಲಿಯಾಗಿ ತಮ್ಮ ಬದುಕು ಹಾಗೂ ವ್ಯಕ್ತಿತ್ವ ನಾಶ ಮಾಡಿಕೊಳ್ಳುತ್ತಾರೆ. ಜನಜಾಗೃತಿ ವೇದಿಕೆ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ತಮ್ಮ ತಪ್ಪಿಗೆ ಆತ್ಮ ನಿವೇದನೆಯೊಂದಿಗೆ ದೇವರಲ್ಲಿ ಕ್ಷಮೆ ಯಾಚಿಸಿ ವ್ಯಸನ ಮುಕ್ತರು ಅಭಿಮಾನದಿಂದ ನವಜೀವನ ನಡೆಸಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಸಲಹೆ ನೀಡಿದರು.
ಪ್ರಧಾನಿಯವರ ಸ್ವಚ್ಛ ಭಾರತದ ಕಲ್ಪನೆಯಂತೆ ಮದ್ಯ ಮುಕ್ತ ಭಾರತ ರೂಪಿಸಲು ಪ್ರಯತ್ನಿಸಬೇಕು ಎಂದು ಹೆಗ್ಗಡೆಯವರು ಆಶಿಸಿದರು.
ವ್ಯಸನಮುಕ್ತರಾದ ಜ್ಞಾನಮೂರ್ತಿ ಮತ್ತು ಶಾಂತ ರಾಜ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್ ಉಪಸ್ಥಿತರಿದ್ದರು.
ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಸ್ವಾಗತಿಸಿದರು. ವಿವೇಕ್ ವಿ. ಪಾೈಸ್ ಧನ್ಯವಾದವಿತ್ತರು.
ರಾಜ್ಯದ ಹತ್ತು ಕಡೆಗಳಲ್ಲಿ ಏಕಕಾಲದಲ್ಲಿ ನಡೆಸಿದ ಸಾವಿರನೆ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿ ವ್ಯಸನಮುಕ್ತರಾದ 1403 ಮಂದಿಯನ್ನು ಗೌರವಿಸಲಾಯಿತು.
ಧರ್ಮಸ್ಥಳ: ಅತಿ ಸ್ವಚ್ಛ ಧಾರ್ಮಿಕ ಕ್ಷೇತ್ರ ಪ್ರಶಸ್ತಿಗೆ ಆಯ್ಕೆ. ಇಂದು ಪ್ರಶಸ್ತಿ ಪ್ರದಾನ ದೆಹಲಿಯಲ್ಲಿ
ಇಂಡಿಯಾ ಟುಡೆ ಇಂಗ್ಲಿಷ್ ಪತ್ರಿಕೆ ನಡೆಸಿದ ಸಮೀಕ್ಷೆಯಂತೆ ಧರ್ಮಸ್ಥಳವು ದೇಶದಲ್ಲಿಯೇ ಅತಿ ಸ್ವಚ್ಛ ಧಾರ್ಮಿಕ ಕ್ಷೇತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇಂದು ಭಾನುವಾರ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಪ್ರಶಸ್ತಿ ಸ್ವೀಕರಿಸುವರು.