ಮನೆಯಲ್ಲಿ ಕನಿಷ್ಟ ಒಂದು ಗಿಡ ನೆಟ್ಟು ಪೋಷಿಸಿ; ಬಿಷಪ್ ಜೆರಾಲ್ಡ್ ಲೋಬೊ

Spread the love

ಮನೆಯಲ್ಲಿ ಕನಿಷ್ಟ ಒಂದು ಗಿಡ ನೆಟ್ಟು ಪೋಷಿಸಿ; ಬಿಷಪ್ ಜೆರಾಲ್ಡ್ ಲೋಬೊ

ಕೋಟ: ಪ್ರತಿಯೊಂದು ಮನೆಯಲ್ಲಿ ಕನಿಷ್ಟ ಒಂದಾದರೂ ಗಿಡ ನೆಟ್ಟು ಅದನ್ನು ಪೋಷಿಸುವ ಕೆಲಸ ಮಾಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಭಾನುವಾರ ಸಂತ ಅಂತೋನಿ ಚರ್ಚ್ ಸಾಸ್ತಾನ ಇದಕ್ಕೆ ಮೂರು ದಿನಗಳ ಅಧಿಕೃತ ಭೇಟಿ ಹಾಗೂ ಚರ್ಚಿನ ಒಂಬತ್ತು ವಿದ್ಯಾರ್ಥಿಗಳಿಗೆ ಧೃಡೀಕರಣದ ಸಂಸ್ಕಾರವನ್ನು ನೀಡಿ ಸಂದೇಶ ನೀಡಿದರು.

confoeramation-sastan

ಇಂದು ನಾವು ಬದುಕುತ್ತಿರುವ ಪರಿಸರ ಸಂಪೂರ್ಣ ಕಲುಷಿತಗೊಂಡಿದ್ದು, ನಾವು ಸೇವಿಸುವ ಗಾಳಿ, ಆಹಾರ ನೀರು ಪ್ರತಿಯೊಂದು ವಿಷಯುಕ್ತವಾಗುತ್ತಿದೆ. ದಿನದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಜಗತ್ತನ್ನು ತಲ್ಲಣಗೊಳಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಪರಿಸರದ ನಾಶ. ಪರಿಸರವನ್ನು ನಾಶ ಮಾಡಲು ತೋರುತ್ತಿರುವ ಆಸಕ್ತಿ ಉಳಿಸುವತ್ತ ತೋರಬೇಕಾದ ಅಗತ್ಯತೆ ಇಂದು ಎದ್ದು ಕಾಣುತ್ತಿದೆ.

ಮುಂದೊಂದು ದಿನ ವಿಶ್ವದಲ್ಲಿ ಯುದ್ದವೇನಾದರೂ ನಡೆದರೆ ಅದು ಕುಡಿಯುವ ನೀರಿಗಾಗಿ, ಕಾರಣ ಇಂದು ಪ್ರತಿಯೊಂದು ಕಡೆಯಲ್ಲೂ ನಾವು ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಒದಗಿ ಬಂದಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಹರಿದು ಹಾಳಾಗಿ ಹೋಗುವ ಮಳೆ ನೀರನ್ನು ಇಂಗುಗುಂಡಿಗಳ ಮೂಲಕ ಇಂಗಿಸಿ ಅದರ ಸದ್ಬಳಕೆಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ. ನೀರನ್ನು ವಿಪರೀತವಾಗಿ ಪೋಲಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಿರ್ವಹಿಸಬೇಕು ಅಲ್ಲದೆ ದಿನನಿತ್ಯದ ಜೀವನದಲ್ಲಿ ನಾವು ಹೆಚ್ಚು ಹೆಚ್ಚು ಉಪಯೋಗಿಸುವ ಪ್ಲಾಸ್ಟಿಕನ್ನು ನಿಷೇಧಿಸುವ ಮನಸ್ಥಿತಿಯನ್ನು ಪ್ರತಿಯೊಬ್ಬರು ಬೇಳೆಸಬೇಕು ಇದರಿಂದ ನಾವು ಪರಿಸರ ರಕ್ಷಣೆಗೆ ನಮ್ಮಿಂದಾದ ಅಳಿಲು ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು ಅದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.

ಈ ವೇಳೆ ಚರ್ಚಿನ ಒಂಭತ್ತು ಮಂದಿ ತರಬೇತಿ ಪಡೆದ ವಿದ್ಯಾರ್ಥಿಗಳಾದ ಕೊನ್ಸಿಟಾ ಬಾಂಜ್, ಲವಿಟಾ ಅನಿತಾ ಕಾರ್ಡೊಜಾ, ಸ್ಯಾಂಡ್ರಾ ಮರೀನಾ, ಲೋಯಲ್ ಕಾರ್ಡೊಜಾ, ಬ್ರಾಯ್ಸನ್ ಡೆನ್ಸಿಲ್ ಡಿ’ಸೋಜ, ಪ್ರಿನ್ಸನ್ ಕಾರ್ಡೊಜಾ, ಗ್ಲೆನ್ ಡಿ’ಸೋಜಾ, ರೋಯಲ್ ಪ್ರಿನ್ಸ್ ರೊಡ್ರಿಗಸ್, ಜೋಶ್ವಾ ಒಲಿವೆರಾ ಇವರಿಗೆ ಬಲಿಪೂಜೆಯ ವೇಳೆಯಲ್ಲಿ ಧೃಡೀಕರಣದ ಸಂಸ್ಕಾರವನ್ನು ನೀಡಿದರು. ವಿದ್ಯಾರ್ಥಿಗಳನ್ನು ಚರ್ಚಿನ ಧರ್ಮಗುರು ವಂ ಜಾನ್ ವಾಲ್ಟರ್ ಮೆಂಡೊನ್ಸಾ ತರಬೇತಿಗೊಳಿಸಿದ್ದರು.


Spread the love