ಮಂಗಳೂರು: ಕಲಾವಿದೆ, ‘ನೂಪುರ ಭ್ರಮರಿ’ ನೃತ್ಯಸಂಶೋಧನಾ ನಿಯತಕಾಲಿಕೆಯ ಸಂಪಾದಕಿ, ಕಲಾಸಂಶೋಧಕಿ ಮನೋರಮಾ ಬಿ.ಎನ್, ಅವರ ಸಲ್ಲಿಸಿದ ‘ಭರತನಾಟ್ಯದ ಸಾಮಾಜಿಕ ಸಂವಹನ ಸಾಧ್ಯತೆಗಳು’ – ಎಂಬ ಪಿ ಎಚ್ ಡಿ ಸಂಶೋಧನಾ ಮಹಾಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಡಾ.ಡಿ.ಎಸ್.ಪೂರ್ಣಾನಂದ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಸಿದ್ಧಪಡಿಸಿದ್ದರು.
ಈಗಾಗಲೇ ‘ಮುದ್ರಾರ್ಣವ’ ‘ಮಹಾಮುನಿ ಭರತ’, ‘ನೃತ್ಯ ಮಾರ್ಗಮುಕುರ’ ಎಂಬ ನೃತ್ಯ ಅಧ್ಯಯನಕಾರರಿಗೆ ಉಪಯುಕ್ತವಾಗುವ ನೃತ್ಯಸಂಶೋಧನಾ ಕೃತಿಗಳನ್ನು ಹಾಗೂ ಶ್ರೀ ಓಂಕಾರೇಶ್ವರ ದೇವಾಲಯದ ಭವ್ಯ ಇತಿಹಾಸವೆಂಬ ಐತಿಹಾಸಿಕ ಕೃತಿಯನ್ನು ಬರೆದಿರುವ ಮನೋರಮಾ ಅವರು, ಹಲವು ಸಂಶೋಧನಾ ಪ್ರಾಜೆಕ್ಟ್ ಹಾಗೂ ಲೇಖನÀಗಳನ್ನು ಬರೆದಿದ್ದಾರೆ. ಪ್ರಸ್ತುತ ಅವರ ಪಿ ಎಚ್ ಡಿ ಮಹಾಪ್ರಬಂಧ ನೃತ್ಯ ಮತ್ತು ಸಾಮಾಜಿಕಸಂವಹನ ಕ್ಷೇತ್ರದ ಸಂಲಗ್ನತೆಯಲ್ಲಿ ಹೊರಬಂದ ಪ್ರಪ್ರಥಮ ಸಂಶೋಧನೆಯೆಂಬ ಗೌರವ ಪಡೆದಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಥಮ ನೃತ್ಯಸಂಶೋಧನಾ ವಿಚಾರಸಂಕಿರಣ-ಕಮ್ಮಟಗಳನ್ನು ನಡೆಸಿರುವ ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಟುವಾಂಗ ಹಾಗೂ ಕೊರವಂಜಿನೃತ್ಯ ವಿಷಯಗಳಿಗೆ ನೃತ್ಯಸಂಶೋಧನೆಯ ಫೆಲೋಶಿಪ್ ಪಡೆದಿದ್ದಾರೆ.
ಪರಂಪರೆಯ ನೃತ್ಯಬಂಧಗಳ ರಸೌಚಿತ್ಯ ವಿನ್ಯಾಸ/ನಾಟ್ಯಶಾಸ್ತ್ರ ಮತ್ತು ಲಕ್ಷಣಗ್ರಂಥಗಳು/ಸಾಂಸ್ಕೃತಿಕ ಪತ್ರಿಕೋದ್ಯಮ/ನೃತ್ಯಕಾವ್ಯ ಮತ್ತು ಪುರಾಣಪ್ರಪಂಚ ಹಾಗೂ ನೃತ್ಯಸಂಶೋಧನಾ ತರಗತಿಗಳನ್ನೂ ರಾಜ್ಯದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿರುವ ನೃತ್ಯಾಸಕ್ತರಿಗೂ ನಡೆಸುತ್ತಿದ್ದಾರೆ. ಭರತನಾಟ್ಯದ ಸಾಮಾಜಿಕ ಜಾಗೃತಿಯ ಸಂಬಂಧ ಹಲವು ನೃತ್ಯಬಂಧಗಳನ್ನು ಸಂಯೋಜಿಸಿ ಸಂಘಟಿಸಿದ್ದು ಆ ಪೈಕಿ ‘ಬಾಲಾಲಾಪ’ವೆಂಬ ವರ್ಣ ನೃತ್ಯಬಂಧ ಇಡಿಯ ಭರತನಾಟ್ಯದ ಇತಿಹಾಸದಲ್ಲೇ ವರ್ಣವನ್ನು ಸಾಮಾಜಿಕ ಶಿಕ್ಷಣದ ಆಯಾಮದಲ್ಲಿ ಬಳಸಿದ ಮೊದಲ ಪ್ರಯತ್ನವೆಂದು ಹೆಗ್ಗಳಿಕೆ ಪಡೆದಿದೆ. ಕರಾವಳಿಯಲ್ಲಿ ಇವರ್ರು ನಡೆಸಿದ ‘ನಾಟ್ಯಶಾಸ್ತ್ರ ಕಥನಮಾಲಿಕೆ’ ಮತ್ತು ‘ಶಾಸ್ತ್ರಪ್ರಯೋಗನೃತ್ಯಚಿಂತನ’ ಎಂಬ ಕಮ್ಮಟಗಳೂ ದಕ್ಷಿಣಕನ್ನಡದ ಪಾಲಿಗೆ ಮೊದಲ ಪ್ರಯತ್ನವೆಂದೇ ಗುರುತಿಸಿಕೊಂಡಿದ್ದು ಭರತಮುನಿಯ ನಾಟ್ಯಶಾಸ್ತ್ರದ ಕಲಿಕೆ ಹಾಗೂ ಪರಂಪರೆಯ ವಿಶೇಷ ನೃತ್ಯಬಂಧಗಳ ಪುನರುಜ್ಜೀವನಕ್ಕೆ ನಾಂದಿ ಹಾಡಿವೆ.
ಇವರು ಪುತ್ತೂರು/ಮಂಗಳೂರು ಫೆಡರಲ್ ಬ್ಯಾಂಕ್ ಪ್ರಬಂಧಕರಾದ ವಿಷ್ಣುಪ್ರಸಾದ್ ಅವರ ಪತ್ನಿ ಮತ್ತು ಮಡಿಕೇರಿಯ ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ.ಜಿ.ನಾರಾಯಣ ಭಟ್ ಮತ್ತು ಸಾವಿತ್ರಿ ದಂಪತಿಗಳ ಸುಪುತ್ರಿ.