ಮರಳು ಮಾಫಿಯಾಗಳ ಚೇಲಾಗಳಂತೆ ವರ್ತಿಸುವ ಗ್ರಾಮಾಂತರ ಠಾಣೆಯ ಅಧಿಕಾರಿಗಳು – ದಯಾನಂದ ಶೆಟ್ಟಿ
ಮಂಗಳೂರು: ಅಕ್ರಮ ಮರಳು ಮಾಫಿಯಾದ ವಿರುದ್ಧ ಕ್ರಮಕೈಗೊಳ್ಳಬೇಕಾಗಿದ್ದ ಪೊಲೀಸರು ಮಾಫಿಯಾದ ಪ್ರಭಾವಕ್ಕೊಳಗಾಗಿ ಅಮಾಯಕ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಮಾಫಿಯಾಗಳ ಚೇಲಾಗಳಂತೆ ವರ್ತಿಸುತ್ತಿರುವ ಭ್ರಷ್ಟ ಪೊಲೀಸರ ನಡೆ ಖಂಡನೀಯ ಎಂದು ಡಿವೈಎಫ್‍ಐನ ಜಿಲ್ಲಾ ಅಧ್ಯಕ್ಷರು, ಮಂಗಳೂರು ನಗರ ಪಾಲಿಕೆ ಸದಸ್ಯರು ಆಗಿರುವಂತಹ ದಯಾನಂದ ಶೆಟ್ಟಿಯವರು DYFI, SFI, CITU ನೇತೃತ್ವದಲ್ಲಿ ಇಂದು ನಗರದಲ್ಲಿ DYFI, SFI ನಾಯಕರ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ಖಂಡಿಸಿ ಹಾಗೂ ಮಂಗಳೂರು ಗ್ರಾಮಾಂತರ, ಬಂದರು ಠಾಣೆಯ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.
CITU ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಸಮಾಜದಲ್ಲಾಗುವ ಅನ್ಯಾಯ, ಅಕ್ರಮ, ಗೂಂಡಾಗಿರಿಗಳನ್ನು ನಿಯಂತ್ರಿಸಿ ಕೊಲೆಗಾರರು, ಸಮಾಜಘಾತುಕರನ್ನು ಬಂಧಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಪೊಲೀಸರ ಹೊಣೆ. ಆದರೆ ಬಂದರು ಠಾಣಾ ಅಧಿಕಾರಿ ಶಾಂತರಾಮ್ ಕುಂದರ್ ಸುಳ್ಳು ಪ್ರಕರಣದ ಅಡಿಯಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಬಂಧಿಸಿ, ಕೈಕೋಳ ತೊಡಿಸಿ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿರುವುದು ನೋಡಿದರೆ ಬಹುಶಃ ಇಂತಹ ಕೆಲಸಕ್ಕೆನೇ ಮುಖ್ಯಮಂತ್ರಿ ಪದಕ ಪಡೆದಿರುವುದೇ ಎಂದು ಗೇಲಿ ಮಾಡಿದರು.
ಮುಂದುವರಿದು ಮಾತನಾಡುತ್ತಾ ಮಂಗಳೂರು ಗ್ರಾಮಾಂತರ ಠಾಣಾಧಿಕಾರಿ ಸುಧಾಕರ್ ಬಹುಶಃ ಅವರು ನೇಮಕವಾಗಿರುವುದು ಸರಕಾರದಿಂದಲೋ ಅಥವಾ ಅಕ್ರಮ ಮರಳು ಮಾಫಿಯಾದ ಚೇಲಾಗಳಿಂದಲೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಠಾಣೆಗೆ ತೆರಳಿದರೆ ನಟ ಸಾಯಿಕುಮಾರ್ ತರಹ ಡೈಲಾಗ್ ಹೊಡೆಯೋ ಮುಖಾಂತರ ಅಮಾಯಕರನ್ನು ಬೆದರಿಸುವುದೇ ಅವರ ಕಾಯಕ. ಹೊಟ್ಟೆಗೆ ಇವರು ಅನ್ನ ತಿನ್ನೋದರ ಬದಲು ಮರಳು ತಿಂದು ಬದುಕುವ ಹಾಗೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಟೀಕಿಸಿದರು. ಇಂತಹ ಭ್ರಷ್ಟ ಪೊಲೀಸ್ ಅಧಿಕಾರಿಗಳಿಂದ ಪೊಲೀಸ್ ಇಲಾಖೆಯ ಮಾನ ಹರಾಜುಗೊಳ್ಳುತ್ತಿದೆ. ಈ ಕೂಡಲೇ ನಗರದ ಪ್ರಾಮಾಣಿಕ, ಜನಸ್ನೇಹಿ ಪೊಲೀಸ್ ಆಯುಕ್ತರು ಮಂಗಳೂರು ಗ್ರಾಮಾಂತರ, ಬಂದರು ಠಾಣೆಯ ತಪ್ಪಿತಸ್ಥ ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ ಮಾತನಾಡಿದರು. ಈ ವೇಳೆ ಡಿವೈಎಫ್‍ಐನ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ರಫೀಕ್ ಹರೇಕಳ, ಸಿಐಟಿಯು ಮುಖಂಡರಾದ ಸಂತೋಷ್ ಶಕ್ತಿನಗರ, ಪ್ರೇಮನಾಥ್ ಜಲ್ಲಿಗುಡ್ಡೆ, ಜಯಂತಿ ಬಿ. ಶೆಟ್ಟಿ, ಎಸ್‍ಎಫ್‍ಐ ಜಿಲ್ಲಾ ಅಧ್ಯಕ್ಷರಾದ ನಿತಿನ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್‍ಐ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಸಿಐಟಿಯು ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಎಸ್‍ಎಫ್‍ಐನ ಮಯೂರಿ ಬೋಳಾರ್ ವಹಿಸಿದ್ದರು.