ಮರಳು ಮಾಫಿಯಾ; ಜಿಲ್ಲಾಧಿಕಾರಿ ಪ್ರಿಯಾಂಕಾ ಹಾಗೂ ಎಸಿ ಶಿಲ್ಪಾ ನಾಗ್ ಮೇಲೆ ಕೊಲೆ ಯತ್ನ

Spread the love

ಮರಳು ಮಾಫಿಯಾ ; ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಹಾಗೂ ಎಸಿ ಶಿಲ್ಪಾ ನಾಗ್ ಮೇಲೆ ಕೊಲೆ ಯತ್ನ

ಉಡುಪಿ: ಮರಳು ಮಾಫಿಯಾವನ್ನು ಮಟ್ಟಹಾಕಲು ಅನೀರೀಕ್ಷಿತಿ ಭೇಟಿ ನೀಡಲು ತೆರಳಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರ ಮೇಲೆ ಮರಳು ಮಾಫಿಯಾದವರಿಂದ ಕೊಲೆಗೆ ಯತ್ನ ನಡೆದ ಆಘಾತಕಾರಿ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಜಿಲ್ಲೆಯಲ್ಲಿ ಹಲವಾರು ತಿಂಗಳುಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಹಲವಾರು ದೂರುಗಳು ನಿರಂತರವಾಗಿ ಬರುತ್ತಿದ್ದು ಈ ಅಕ್ರಮ ಮರಳುಗಾರಿಕೆ ತಡೆಯಲು 2 ಮೊಬೈಲ್ ಚೆಕ್ ಪೋಸ್ಟ್ ಹಾಗೂ ಶಿರೂರು ಮತ್ತು ಹೊಸಂಗಡಿನಲ್ಲಿ ಚೆಕ್ ಪೋಸ್ಟ್ ಕೂಡ ಹಾಕಿದ್ದು ಆದರೂ ಕೂಡ ಅಕ್ರಮ ಮರಳುಗಾರಿಕೆ ನಿಂತಿರಲಿಲ್ಲ. ಜನರು ಕೂಡ ಜಿಲ್ಲಾಧಿಕಾರಿಗಳೇ ಸ್ವತಃ ಬಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳೂವಂತೆ ಆಗ್ರಹಿಸುತ್ತಿದ್ದರು. ಆದ್ದರಿಂದ ಭಾನುವಾರ ರಜಾದಿನವಾದ್ದರಿಂದ ಜಿಲ್ಲಾಧಿಕಾರಿಗಳು ಪ್ರಸ್ತುತ ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿಯ ಪ್ರಭಾರ ಹುದ್ದೆಯಲ್ಲಿ ಇರುವುದರಿಂದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅವರ ಅಂಗರಕ್ಷಕ ಹಾಗೂ ಜಿಲ್ಲಾಪಂಚಾಯತಿಯ ಗುತ್ತಿಗೆ ವಾಹನದ ಚಾಲಕ ಒಂದು ವಾಹನದಲ್ಲಿ ಹೋದರೆ ಇನ್ನೊಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಅವರ ಪತಿ, ತಮ್ಮ ಖಾಸಗಿ ವಾಹನದಲ್ಲಿ ತಮ್ಮ ಚಾಲಕನೊಂದಿಗೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ಅನೀರೀಕ್ಷಿತ ಭೇಟಿ ನೀಡಲು ನಿರ್ಧರಿಸಿ ರಾತ್ರಿ ಸುಮಾರು 10 ಗಂಟೆಗೆ ಹೊರಟಿದ್ದರು.
ಪ್ರಥಮವಾಗಿ ಹೆಚ್ಚು ದೂರುಗಳು ಬರುತ್ತಿದ್ದ ಹಳ್ನಾಡು ಪ್ರದೇಶಕ್ಕೆ ಭೇಟಿ ನೀಡಿಲು ತೆರಳಿದ್ದ ವೇಳೆ ಇವರ ವಾಹನಗಳನ್ನು ಹಿಂದಿನಿಂದ ಕೆಲವು ವ್ಯಕ್ತಿಗಳು ಬೈಕಿನಲ್ಲಿ ಬೆಂಬತ್ತಿಕೊಂಡು ಬರುತ್ತಿದ್ದರು. ಜಿಲ್ಲಾಧಿಕಾರಿಗಳನ್ನು ನೋಡಿದ ಕೂಡಲೇ ಕೆಲವು ಲಾರಿಯ ಚಾಲಕರು ಲಾರಿಗಳನ್ನು ಬಿಟ್ಟು ಓಡಿಹೋಗಿದ್ದು, ಅದರ ಕೀಗಳನ್ನು ಸೀಜ್ ಮಾಡಲಾಗಿದೆ. ಧಕ್ಕೆಯ ಬಳಿ ಜಿಲ್ಲಾಧಿಕಾರಿಗಳ ತಂಡ ತಲುಪಿದ ವೇಳೆ ಕೆಲವೊಂದು ಉತ್ತರಭಾರತದ ಕಾರ್ಮಿಕರು ಅಲ್ಲಿ ಟೆಂಟ್ ಹಾಕಿ ಅಲ್ಲಿ ಮರುಳು ತೆಗೆಯುತ್ತಿದ್ದರು ಅಲ್ಲದೆ ಹೆಚ್ಚಿನ ಮರಳು ಕೂಡ ದಾಸ್ತಾನು ಮಾಡಲಾಗಿತ್ತು. ಅಲ್ಲಿದ್ದ ಸುಮಾರು 6 ಮಂದಿಯನ್ನು ಹಿಡಿದು ಮತ್ತೊಂದು ವಾಹನದಲ್ಲಿ ಹಾಕಿ ಕುಂದಾಪುರ ಪೋಲಿಸರಿಗೆ, ಕುಂದಾಪುರ ತಹಶೀಲ್ದಾರ್ ಸಮಕ್ಷಮ ಅಕ್ರಮ ಮರುಳುಗಾರಿಕೆ ಕಾರ್ಮಿಕರ ವಿರುದ್ದ ಮೊಕದ್ದಮೆ ದಾಕಲು ಮಾಡಲಾಗಿತ್ತು.

ಅಲ್ಲಿಂದ ಕಂಡ್ಲೂರು ಪ್ರದೇಶದಲ್ಲಿ ಕೂಡ ಹೆಚ್ಚಿನ ಸಂಖ್ಯೆಯ ಮರಳುಗಾರಿಕೆ ನಡೆಯುತ್ತಿರುವ ಕುರಿತು ದೂರುಗಳು ಬರುತ್ತಿದ್ದ ಹಿನ್ನಲೆಯಲ್ಲಿ ಅಲ್ಲಿಗೆ ತೆರಳುತ್ತಿದ್ದ ವೇಳೆ ಕೂಡ ಸುಮಾರು 20 ಬೈಕುಗಳಲ್ಲಿ ಜಿಲ್ಲಾಧಿಕಾರಿಗಳ ವಾಹನದ ಹಿಂದೆ ಫಾಲೋ ಮಾಡಿಕೊಂಡು ಬರುತ್ತಿದ್ದರು. ಕಂಡ್ಲೂರು ಬ್ರಿಡ್ಜ್ ಬಳಿ ಕಡವು ಬಳಿ ಸುಮಾರು ಕಾರ್ಮಿಕರ ಟೆಂಟ್ ಇದ್ದು, ಅಲ್ಲಿ ಜಿಲ್ಲಾಧಿಕಾರಿಗಳನ್ನು ಕಂಡ ಕೂಡ ಕಾರ್ಮಿಕರು ಓಡಿ ಹೋಗಲು ಪ್ರಯತ್ನಿಸಿದ್ದು, ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಹಾಗೂ ಡ್ರೈವರ್ ಅವರನ್ನು ಹಿಡಿಯವ ಸಲುವಾಗಿ ಬೆನ್ನಟ್ಟಿದ್ದು, ಕಾರ್ಮಿಕರೆಲ್ಲ ಅಲ್ಲಿಯೇ ಪಕ್ಕದಲ್ಲಿದ್ದ ಮನೆಯ ಒಳಗಡೆ ಒಡಿದ್ದು, ಕೂಡಲೇ ಆ ಮನೆಯಿಂದ ಸುಮಾರು ಮಂದಿ ಮಹಿಳೆಯರು, ವೃದ್ದರು ಹೊರಗಡೆ ಬಂದಿದ್ದು, ಅವರ ಜೊತೆ ಬೈಕಿನಲ್ಲಿ ಬಂದ ಜನರು ಕೂಡ ಸೇರಿಕೊಂಡು ಸುಮಾರು 60ಕ್ಕೂ ಅಧಿಕ ಮಂದಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿ ತಂಡದ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅದೇ ವೇಳೆ ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಹಾಗೂ ಡ್ರೈವರ್ ಮೇಲೆ ಮೊದಲು ಹಲ್ಲೆ ನಡೆಸಿದ್ದು ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ತಾನು ಜಿಲ್ಲಾಧಿಕಾರಿ ಎಂದು ಪರಿಚಯಿಸಿಕೊಂಡಾಗ ಜಿಲ್ಲಾಧಿಕಾರಿಗೆ ಅವಾಚ್ಯಾ ಶಬ್ದಗಳಿಂದ ಬೈದದಲ್ಲದೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಯ ಮೇಲೆ ಹಲ್ಲೆಯನ್ನು ಮಾಡಲು ಕೂಡ ಹೋದರು ಅಲ್ಲದೆ ಪಕ್ಕದಲ್ಲೇ ಇದ್ದ ಉಪವಿಭಾಗಾಧಿಕಾರಿಯ ಪತಿ ಹಾಗೂ ಡ್ರೈವರ್ ಮೇಲೆ ಕೂಡ ಹಲ್ಲೆ ನಡೆಸಲು ಬಂದಿದ್ದು ಸ್ಥಳದಲ್ಲೇ ಇದ್ದ ಅಂಪಾರು ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾದಿಕಾರಿ ಸಹಾಯಕ್ಕೆ ಬಂದರು ಆಗ ಅವರಿಗೂ ಕೂಡ ಹಲ್ಲೆ ನಡೆಸಿದ್ದಾರೆ.

ಬಳಿಕ ಇನ್ನೂ ಹೆಚ್ಚು ಹೊತ್ತು ಇರುವುದು ಅಪಾಯ ಎಂದು ಅರಿತ ಜಿಲ್ಲಾಧಿಕಾರಿಗಳು ಅಲ್ಲಿಂದ ವಾಪಾಸು ಹೊಗಲು ನಿರ್ದರಿಸಿ ಎರಡೂ ವಾಹನಗಳಲ್ಲಿ ವೇಗವಾಗಿ ವಾಪಾಸು ಬಂದರು ಅದರೆ ಈ ವೇಳೆ ಗ್ರಾಮ ಲೆಕ್ಕಿಗರು ಅಲ್ಲಿದ್ದು ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೂಡಲೇ ಅವರನ್ನು ರಕ್ಷಿಸುವ ಉದ್ದೇಶದಿಂದ ಪೋಲಿಸರಿಗೆ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಹೋಗುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದರು. ಆದರೆ ಪೋಲಿಸರು ಅಲ್ಲಿಗೆ ತಲುಪುವಾಗಲೇ ಜನರೆಲ್ಲಾ ಸೇರಿ ಅವರಿಗೆ ಹೊಡೆದಿದ್ದು ಪೋಲಿಸರ ವಾಹನ ನೋಡಿ ಬಳಿಕ ಆತನನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ.

ಅನೀರಿಕ್ಷಿತ ಧಾಳಿಯ ವೇಳೆ ಪೋಲಿಸರನ್ನು ಯಾಕೆ ಜೊತೆಯಲ್ಲಿ ಕರೆದುಕೊಂಡು ಹೋಗಿಲ್ಲ ಎಂದು ಕೇಳಿದ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಪ್ರತಿ ಸಾರಿ ಧಾಳಿಗೆ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಪೋಲಿಸರ ಜೊತೆ ಹೊರಟಾಗ ಅಕ್ರಮ ದಂದೆಕೋರರಿಗೆ ಮಾಹಿತಿ ಲಭಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು ಇದರಿಂದ ಜನ ಜಿಲ್ಲಾಡಳಿತದ ವಿರುದ್ದವೇ ಆರೋಪ ಮಾಡುತ್ತಿದ್ದರು ಅದ್ದರಿಂದ ತಾನು ಸ್ವತಃ ತನ್ನ ಗನ್ ಮ್ಯಾನ್ ಜೊತೆ ಧಾಳಿ ಮಾಡಲು ನಿರ್ದರಿಸಿ ತೆರಳಿದ್ದೆ ಎಂದರು. ಒಬ್ಬ ಜಿಲ್ಲಾಧಿಕಾರಿಯಾಗಿ ಈ ಅಕ್ರಮ ಮರಳುಗಾರಿಕೆಯ ನಿಜವಾದ ವಿಷಯ ತಿಳಿಯುವ ಸಲುವಾಗಿ ಪೋಲಿಸರ ಸಹಾಯ ಇಲ್ಲದೆ ತೆರಳಲು ನಿರ್ಧರಿಸಿ ಇಂತಹ ಒಂದು ರಿಸ್ಕ ತೆಗೆದುಕೊಂಡು ಹೋಗಿದ್ದೆ ಎಂದರು. ಈಗ ಉಡುಪಿಯ ನಗರ ಠಾಣೆಯಲ್ಲಿ ಈ ಕುರಿತು ಎಫ್ ಐ ಆರ್ ದಾಖಲಿಸುತ್ತೇನೆ. ನಾವು ಎಲ್ಲರೂ ಜೊತೆಯಾಗಿ ಸರಕಾರಿ ಕರ್ತವ್ಯವದ ವೇಳೆ ಕೊಲೆಯತ್ನ ಹಾಗೂ ಹಲ್ಲೆ ಕುರಿತು ಪ್ರಕರಣ ದಾಖಲಿಸಲು ಸೂಚಿಸಿದ್ದು ಗ್ರಾಮ ಲೆಕ್ಕಿಗರನ್ನು ಕೂಡ ಇಲ್ಲಿಗೆ ಕರೆಯಿಸಿದ್ದೇನೆ. ಪ್ರಕರಣ ಕುಂದಾಪುರ ವ್ಯಾಪ್ತಿಯಲ್ಲಿ ನಡೆದರೂ ಕೂಡ ಅಲ್ಲಿ ತಾನು ನಿಲ್ಲುವುದು ಸೂಕ್ತ ಅಲ್ಲ ಎಂದು ತಿಳಿದು ಉಡುಪಿಗೆ ಬಂದು ಪ್ರಕರಣ ದಾಖಲಿಸಿದ್ದೇನೆ. ಗ್ರಾಮ ಲೆಕ್ಕಿಗರಿಗೆ ಹೊಡೆಯುವುದಾಗಿ ಹೇಳೀದ ಆಡಿಯೋ ಕ್ಲಿಪ್ ಹಾಗೂ ತಮಗೆ ಹೆದರಿಸಿದ ವ್ಯಕ್ತಿಗಳ ಫೋಟೊ ನಮ್ಮಲ್ಲಿದ್ದು ಸಾಕ್ಷಿಯಾಗಿ ಅದನ್ನು ಪೋಲಿಸರಿಗೆ ನೀಡಲಿದ್ದೇವೆ. ಅಲ್ಲಿದ್ದ ಜನರು ಎಲ್ಲರೂ ಕೂಡ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು.

ಸುದ್ದಿ ತಿಳಿದು ನಗರ ಠಾಣೆಗೆ ಧಾವಿಸಿ ಬಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಟಿ ಬಾಲಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿ ಘಟನೆಯ ಕುರಿತು ಸಂಪೂರ್ಣ ವಿವರವನ್ನು ಜಿಲ್ಲಾಧಿಕಾರಿಯವರಿಂದ ಪಡೆದುಕೊಂಡಿದ್ದೇನೆ. ಈಗಾಗಲೇ 6 ಮಂದಿಯನ್ನು ವಶಕ್ಕೆ ಪಡೆದಿದ್ದು, ಘಟನಾ ಸ್ಥಳಕ್ಕೆ ಈಗಾಗಲೇ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕುಂದಾಪುರ ಡಿವೈಎಸ್ಪಿ ಪ್ರವೀಣ್ ಹೋಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡಿದ್ದೇನೆ ಎಂದರು.

ಒಟ್ಟಾರೆಯಾಗಿ ಉತ್ತರ ಕರ್ನಾಟಕದಲ್ಲಿ ಕಂಡು ಬರುತ್ತಿದ್ದ ಮರಳು ಮಾಫಿಯಾದಿಂದ ಆಧಿಕಾರಿಗಳ ಮೇಲೆ ಹಲ್ಲೆ, ಕೊಲೆಯತ್ನ ನಡೆಸುವುದು ಕೊಲೆ ಮಾಡುವುದು ಈಗ ಉಡುಪಿ ಜಿಲ್ಲೆಗೂ ಬಂದಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯೇ ಸರಿ. ಸರಕಾರ ಇನ್ನಾದರೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುತ್ತದೋ ಕಾದು ನೋಡಬೇಕು.


Spread the love