Home Mangalorean News Kannada News ಮರಳು : ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ 

ಮರಳು : ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ 

Spread the love

ಮರಳು : ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ 

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‍ಝಡ್ ವಲಯದಲ್ಲಿ ಮರಳು ಪರವಾನಿಗೆ ನೀಡಲಾಗಿದ್ದರೂ, ಕೆಲವು ಸ್ಥಳಗಳಲ್ಲಿ ಮರಳುಗಾರಿಕೆ ನಡೆಸಲು ತೊಡಕಾಗಿರುವ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಸಿಆರ್‍ಝಡ್ ವಲಯದಲ್ಲಿ ಮರಳು ತೆಗೆಯಲು 105 ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಇದರಲ್ಲಿ ಅಂದಾಜು 11 ಲಕ್ಷ ಮೆಟ್ರಿಕ್ ಟನ್ ಮರಳು ಎತ್ತಬಹುದು. ಆದರೆ ಇದುವರೆಗೆ 4 ಲಕ್ಷ ಮೆಟ್ರಿಕ್ ಟನ್ ಮರಳು ಮಾತ್ರ ಎತ್ತಲಾಗಿದೆ. ಮರಳುಗಾರಿಕೆ ಬ್ಲಾಕ್‍ಗಳ ಪ್ರದೇಶದಲ್ಲಿ ಸ್ಥಳೀಯವಾದ ಕೆಲವು ಸಮಸ್ಯೆಗಳಿಂದ ಮರಳುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮರಳುಗಾರಿಕೆ ನಡೆಸಬೇಕು. ಜನಸಾಮಾನ್ಯರಿಗೆ ಸಮರ್ಪಕವಾಗಿ ಕಡಿಮೆ ದರದಲ್ಲಿ ಮರಳು ದೊರಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಇದಲ್ಲದೇ, ಮೂರು ದಿನಗಳೊಳಗೆ ಆಯಾ ತಾಲೂಕು ಹಂತದಲ್ಲಿ ಸಭೆ ಕರದು ಚರ್ಚಿಸುವಂತೆ ಸೂಚಿಸಿದರು.

ಸಭೆಗೆ ಮಾಹಿತಿ ನೀಡಿದ ಗಣಿ ಇಲಾಖೆ ಅಧಿಕಾರಿಗಳು, ಸಿಆರ್‍ಝಡ್ ವಲಯದ ನೇತ್ರಾವತಿ ನದಿ ತೀರದಲ್ಲಿ 10 ಬ್ಲಾಕ್ ಹಾಗೂ ಫಲ್ಗುಣಿ ತೀರದಲ್ಲಿ 10 ಬ್ಲಾಕ್‍ಗಳನ್ನು ಮರಳುಗಾರಿಕೆಗೆ ಗುರುತಿಸಲಾಗಿದೆ. ಎಷ್ಟು ಟನ್ ಮರಳು ಇದೆ ಎಂಬುದನ್ನು ಅಂದಾಜಿಸಿ ಬ್ಲಾಕ್ ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ವರ್ಷಕ್ಕೆ ಸರಾಸರಿ 12 ಲಕ್ಷ ಮೆಟ್ರಿಕ್ ಟನ್ ಮರಳು ಅಗತ್ಯವಿದೆ. ನಾನ್ ಸಿಆರ್‍ಝಡ್ ವಲಯದಲ್ಲಿ 22 ಬ್ಲಾಕ್‍ಗಳನ್ನು ಗುರುತಿಸಲಾಗಿದ್ದು, ಈ ಪೈಕಿ 7 ಬ್ಲಾಕ್‍ಗಳಲ್ಲಿ ಮರಳು ಎತ್ತಲು ಅನುಮೋದನೆಯಾಗಿ, ಪರಿಸರ ಕ್ಲಿಯರೆನ್ಸ್‍ಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಪ್ರಸಕ್ತ ಜನಸಾಮಾನ್ಯರಿಗೆ ಸುಲಭದಲ್ಲಿ ಮರಳು ಸಿಗುವಂತಾಗಲು ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಪೂರೈಸಲಾಗುತ್ತಿದ್ದು, ಇದುವರೆಗೆ ಇದರಿಂದ 50 ಸಾವಿರ ಮೆಟ್ರಿಕ್ ಟನ್‍ಗಳಷ್ಟು ಮರಳು ಪೂರೈಸಲಾಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸಿ, ಪ್ರತೀ ತಾಲೂಕು ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಸಾರ್ವಜನಿಕರಿಗೆ ಆ್ಯಪ್ ಮೂಲಕ ಮರಳು ಒದಗಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರತೀ ಗ್ರಾಮ ಪಂಚಾಯತ್‍ಗಳಲ್ಲಿಯೂ ಇಂತಹ ವ್ಯವಸ್ಥೆ ಸ್ಥಾಪಿಸುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು.

ಶಾಸಕ ಯು.ಟಿ. ಖಾದರ್ ಮಾತನಾಡಿ, ಹೊರರಾಜ್ಯಗಳಿಗೆ ಮರಳು ಅಕ್ರಮ ಸಾಗಾಟವೇ ಜಿಲ್ಲೆಯ ಮರಳು ಸಮಸ್ಯೆಗೆ ಮೂಲ ಕಾರಣ. ಈ ನಿಟ್ಟಿನಲ್ಲಿ ಗಡಿ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆ, ಭದ್ರತಾ ವ್ಯವಸ್ಥೆ ಬಿಗಿಗೊಳಿಸಬೇಕು ಎಂದು ಹೇಳಿದರು. ಸಂಪ್ರದಾಯಕವಾಗಿ ಮರಳುಗಾರಿಕೆ ಮಾಡುವ ಕುಟುಂಬಕ್ಕೆ ಪರವಾನಿಗೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಕಾರಣ ಅಂತವರಿಗೆ ಪರವಾನಿಗೆಯನ್ನು ಆದಷ್ಟು ಬೇಗನೇ ಕೊಡಿಸಬೆಕು ಎಂದು ಸಚಿವರಲ್ಲಿ ಮನವರಿಕೆ ಮಾಡಿದರು,

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜನಸಾಮಾನ್ಯರಿಗೆ ಸಕಾಲದಲ್ಲಿ ಮರಳು ದೊರೆಯದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಮರಳು ಉದ್ದಿಮೆದಾರರಿಗಿಂತ ಜನಸಾಮಾನ್ಯರನ್ನು ಹಿತದೃಷ್ಠಿಯಲ್ಲಿಟ್ಟು ನೀತಿ ಜಾರಿಗೆ ತರಬೇಕು. ಮರಳನ್ನು ತೆಗೆಯುವವರ ಬಗ್ಗೆ ಸಮಸ್ಯೆಗಳನ್ನು ಆಲಿಸಿದರೆ ಸಾಲದು, ಅದನ್ನು ಉಪಯೋಗಿಸುವ ಬಡವರ, ಮದ್ಯಮ ವರ್ಗದವರ ಸಮಸ್ಯೆಗಳನ್ನು ಕೂಡಾ ಆಲಿಸಬೇಕು. ಮದ್ಯವರ್ತಿಗಳ ಹಾವಳಿ ತಪ್ಪಿಸಿ ನಿಗಧಿತ ಬೆಲೆಯಲ್ಲಿ ಮರಳು ದೊರೆಯುವಂತೆ ಆಗಬೇಕು ಎಂದು ಹೇಳಿದರು.

ಖನಿಜ ನಿಧಿಯಲ್ಲಿ ರೂ. 4.62 ಕೋಟಿ : ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ರೂ. 4.62 ಕೋಟಿ ಮೊತ್ತ ಇದ್ದು, ಮರಳು, ಕೋರೆ ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶಗಳಿಗೆ ಸಂಗ್ರಹವಾದ ಹಣವನ್ನು ಮೊದಲ ಆದ್ಯತೆ ಮೇರೆಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಆಯಾ ಶಾಸಕರೊಂದಿಗೆ ಚರ್ಚಿಸಿ ವಿನಯೋಗಿಸಲು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವ ಹಳ್ಳಿಗಳಲ್ಲಿ ಗಣಿಗಾರಿಕೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿದೆಯೋ, ಅಂತಹಾ ಹಳ್ಳಿಗಳನ್ನು ಸರ್ವೆ ಮಾಡಿ ಆ ಹಳ್ಳಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಕಲ್ಲುಕೋರೆ : ಜಿಲ್ಲೆಯ ಹಲವೆಡೆ ಕಲ್ಲುಕೋರೆಗಳ ಪರ್ಮಿಟ್ ನವೀಕರಣವಾಗದೇ ಕೆಂಪುಕಲ್ಲು ಮತ್ತು ಕಪ್ಪು ಕಲ್ಲು ಪೂರೈಕೆಯಲ್ಲಿ ವ್ಯತ್ಯವಾಗುತ್ತಿದೆ. ಕೆಲವು ಕೋರೆಗಳಲ್ಲಿ ಡೀಮ್ಡ್ ಫಾರೆಸ್ಟ್ ಅರಣ್ಯ ಸಮಸ್ಯೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಕಂದಾಯ, ಗಣಿ ಹಾಗೂ ಅರಣ್ಯ ಇಲಾಖೆಯವರು ಜಂಟೀ ಸರ್ವೇ ನಡೆಸಿ ಭೂಮಿಯ ಗಡಿ ಗುರುತಿಸಬೇಕು. ಕೆಂಪು ಕಲ್ಲು ಗಣಿಗಾರಿಕೆಗೆ ಪರವಾನಿಗೆ ಅವಧಿ ಮೂರು ತಿಂಗಳು ಬದಲು 1 ವರ್ಷಕ್ಕೆ ವಿಸ್ತರಿಸುವ ಬಗ್ಗೆ ಪರಿಶೀಲಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಸಭೆಯಲ್ಲಿ ಸಚಿವರು ಮರಳು ಹಾಗೂ ಕಲ್ಲುಕೋರೆ ಉದ್ಯಮಿಗಳ ಅಹವಾಲುಗಳನ್ನು ಆಲಿಸಿದರು.

ಸಭೆಯಲ್ಲಿ ಶಾಸಕ ರಾಜೇಶ್ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖ್ಯ ಕಾರ್ಯನಿರ್ವಹಣಾಧೀಕಾರಿ ಡಾ. ಸೆಲ್ವಮಣಿ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version