ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ

Spread the love

ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ

ಕುಂದಾಪುರ: ಮರವಂತೆಯ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ 85 ಕೋ.ರೂ. ಅನುದಾನ ಮಂಜೂರುಗೊಳಿಸಿದ್ದು, ಸದ್ಯದಲ್ಲೇ ಇದರ ಯೋಜನಾ ವರದಿಗಳನ್ನು ಸಿದ್ದಪಡಿಸಿ ಟೆಂಡರ್ ಪ್ರತಿಕ್ರಿಯೆಗಳನ್ನು ಮುಗಿಸಿ ಇನ್ನೆರಡು ತಿಂಗಳೊಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಮರವಂತೆಯ ಹೊರ ಬಂದರಿಗೆ ಶನಿವಾರ ಭೇಟಿ ನೀಡಿ ಬಂದರು ನಿರ್ಮಾಣ ಹಾಗೂ ಬ್ರೇಕ್ವಾಟರ್ ನಿರ್ಮಾಣ ಕಾಮಗಾರಿ ಕುರಿತಂತೆ ಮೀನುಗಾರರ ಅಹವಾಲು ಸ್ವೀಕರಿಸಿದರು.

ಈ ಹಿಂದೆ ನಡೆದ 42 ಕೋ.ರೂ. ವೆಚ್ಚದ ಬಂದರು ಹಾಗೂ ಬ್ರೇಕ್ವಾಟರ್ ಕಾಮಗಾರಿಯಿಂದ ಮೀನುಗಾರಿಕೆಗೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಇದರಿಂದ ತೊಂದರೆಗಳೇ ಹೆಚ್ಚಾಗುತ್ತಿದೆ ಎನ್ನುವ ವಿಚಾರವನ್ನು ಮೀನುಗಾರರು ಸಚಿವರ ಗಮನಕ್ಕೆ ತಂದರು.

ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, 2ನೇ ಹಂತದ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡಿದರೆ ಮಾತ್ರ ಎರಡೂ ಕಾಮಗಾರಿಯೂ ಪ್ರಯೋಜನವಾಗಲಿದೆ. ಈ ಹಿಂದೆ ನಡೆದ 42 ಕೋ.ರೂ. ವೆಚ್ಚದ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪು ಮಾಡಿರುವ ಅಧಿಕಾರಿಗಳು, ಇಂಜಿನಿಯರ್ಗಳ ವಿರುದ್ದ ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಮೀನುಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಗಣೇಶ ಕೆ., ಬಂದರು ಮತ್ತು ಮೀನುಗಾರಿಕೆ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮಂಚೇಗೌಡ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ ಕುಮಾರ್, ಕಿರಿಯ ಇಂಜಿನಿಯರ್ ವಿಜಯ ಶೆಟ್ಟಿ, ಬÉೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಸಮಾಜಸೇವಕ ಗೋವಿಂದ ಬಾಬು ಪೂಜಾರಿ, ಜಿ.ಪಂ. ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮೀನುಗಾರರ ಮುಖಂಡರಾದ ಮೋಹನ್ ಖಾರ್ವಿ, ಶಂಕರ್ ಖಾರ್ವಿ ಹಾಗೂ ಶ್ರೀರಾಮ ಕರಾವಳಿ ಮೀನುಗಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.


Spread the love