ಮರವೂರು ಡ್ಯಾಮ್ ಪ್ರದೇಶಕ್ಕೆ ಜಿಲ್ಲಾಧಿಕಾರಿ , ಮಾಜಿ ಸಚಿವ ಅಭಯಚಂದ್ರಜೈನ್ ಮೇಯರ್ ಭೇಟಿ
ಮಂಗಳೂರು: ಮೂಳೂರು-ಮರವೂರು ವ್ಯಾಪ್ತಿಯಲ್ಲಿ ಫಲ್ಗುಣಿ ನದಿ ನೀರು ಸಂಪೂರ್ಣ ಕಲುಷಿತಗೊಂಡು ಮೀನು, ಏಡಿ, ದನಗಳು ಸಾಯುತ್ತಿದ್ದು, ಇದಕ್ಕೆ ಕಾರಣವಾದ ಕೈಗಾರಿಕೆಗಳ ಬಗ್ಗೆ 4 ದಿನದೊಳಗೆ ವರದಿ ತಯಾರಿಸಿ, ಸಂಬಂಧಪಟ್ಟ ಕೈಗಾರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದರು ಅರಣ್ಯ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ ಹೇಳಿದರು.
ಗುರುವಾರ ಮರವೂರು ಡ್ಯಾಮ್ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳು, ಮಾಜಿ ಸಚಿವ ಅಭಯಚಂದ್ರಜೈನ್, ಮೇಯರ್ ಅವರೊಂದಿಗೆ ನದಿಪ್ರದೇಶ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹೇಳಿದರು.
ನೀರು ಕಲುಷಿತಗೊಂಡು ಮೀನು ಸಾಯುತ್ತಿರುವ ಬಗ್ಗೆ ಪರಿಸರ ಅಧಿಕಾರಿಗಳು ವಿಚಾರ ಮಾಡಿ ತಿಳಿದುಕೊಳ್ಳುತ್ತಾರೆ. ಹಿಂದೆ ಕೂಡಾ ಈ ಸಮಸ್ಯೆಗಳಿದ್ದಿರಬಹುದು ಮತ್ತು ಈ ಬಾರಿ ಅದು ಹೆಚ್ಚಳವಾಗಿದೆ. ಇದಕ್ಕೆ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಇದಕ್ಕೆ ಕಾರಣಕರ್ತರಾದ ಸರಕಾರಿ ಅಥವಾ ಯಾವುದೇ ಸಂಸ್ಥೆ ಇರಬಹುದು, ಅದರ ಮೇಲೆ ಪರಿಸರ ಇಲಾಖೆ ತನ್ನದೇ ಆದ ಅಧಿಕಾರವನ್ನು ಬಳಸಿ ಕಾನೂನು ರೀತಿ ಕ್ರಮಕೈಗೊಳ್ಳಲಿದ್ದೇವೆ. ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು, ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಿದ್ದಾರೆ. ಕಲುಷಿತಗೊಂಡ ನೀರು ಶುದ್ಧೀರಕಣಕ್ಕೆ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಕಲುಷಿತಗೊಳ್ಳಲು ಕಾರಣವೇನು, ಎಲ್ಲಿಂದ ಈ ರಾಸಾಯನಿಕಗಳು ಬಂತು ಎಂಬ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ಎನ್ಐಟಿಕೆ ಅಧಿಕಾರಿಗಳು ಜತೆಗೂಡಿ ಅಧ್ಯಯನ ನಡೆಸಲಿದ್ದಾರೆ ಎಂದರು.
ಜಿಲ್ಲಾಡಳಿತ ಕ್ರಮಕೈಗೊಳ್ಳಲು ವಿಳಂಬವಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಧ್ಯಮಗಳ ಮುಖೇನ ನನ್ನ ಗಮನಕ್ಕೆ ಬಂದಿದ್ದು, ಅದರ ಬಗ್ಗೆ ತಕ್ಷಣ ಗಮನಹರಿಸುವಂತೆ ಹೇಳಿದ್ದೇನೆ. ಅಧಿಕಾರಿಗಳು ಈ ನಿಟ್ಟಿನ್ಲಲಿ ಕಾರ್ಯಪ್ರವೃತ್ತರಾಗಿ ಶೀಘ್ರದಲ್ಲೇ ವರದಿ ನೀಡಲಿದ್ದಾರೆ ಎಂದರು.
ಶಾಸಕ ಅಭಯಚಂದ್ರಜೈನ್ ಮಾತನಾಡಿ, ಜಿಲ್ಲೆಯ ಏಕೈಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದಾಗಿದೆ. 8 ಗ್ರಾಮಪಂಚಾಯಿತಿನ ಬಜಪೆ, ಜೋಕಟ್ಟೆ, ಮಳವೂರು, ಕೆಂಜಾರು, ಪೆರ್ಮುದೆ, ಕುತ್ತೆತ್ತೂರು, ಮೂಡುಶೆಡ್ಡೆ, ಪಡುಶೆಡ್ಡೆ, ತೆಂಕ ಎಕ್ಕಾರು, ಬಡಗ ಎಕ್ಕಾರು, ಬಾಳ, ಕಳವಾರು, ಸೂರಿಂಜೆ, ದೇಲಂತಬೆಟ್ಟು ಸೇರಿದಂತೆ 14ಗ್ರಾಮಗಳು ಇದರ ಪ್ರಯೋಜನ ಪಡೆಯುತ್ತಿದೆ. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.
ಮಂಗಳೂರು ಮೇಯರ್ ಕವಿತಾ ಸನಿಲ್ ಮಾತನಾಡಿ, ಪರಿಸರಕ್ಕೆ ಹಾನಿ ಮಾಡುವ ಕೈಗಾರಿಕೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಈಗಾಗಲೇ ಬೆಂಗಳೂರಿನಲ್ಲಿ ನಡೆದ ಪರಿಸರ ಇಲಾಖೆಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಅಧಿಕಾರಿಗಳು ಸೂಕ್ತಕ್ರಮಕೈಗೊಳ್ಳಬೇಕಿದೆ ಎಂದರು.
ಕುಡಿಯುವ ನೀರಿಗೆ ಆತಂಕವಿಲ್ಲ: ಮರವೂರು ಡ್ಯಾಂನ ಕೆಳಭಾಗದಲ್ಲಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಆದರೆ ಇದರಿಂದ ಮರವೂರು ಡ್ಯಾಂನಿಂದ ಸರಬರಾಜಾಗುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಹೇಳಿದರು.
ಡ್ಯಾಮ್ನಿಂದ ಸರಬರಾಜಾಗುವ ನೀರಿನ ಬಗ್ಗೆ ಪ್ರತಿದಿನ ನೀರಿನ ಮೌಲ್ಯಗಳನ್ನು ತಪಾಸಣೆ ಮಾಡಿ ಸರಬರಾಜು ಮಾಡಲಾಗುತ್ತಿದೆ. ಇನ್ನು ಮುಂದಕ್ಕೂ ಪ್ರತಿಭಾರಿಯೂ ತಪಾಸಣೆ ಮಾಡಿಯೇ ಅಧಿಕಾರಿಗಳು ಸರಬರಾಜು ಮಾಡಲಿದ್ದಾರೆ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್ ಮಾತನಾಡಿ, ಡ್ಯಾಮ್ ನೀರಿಗೆ ರಾಸಾಯನಿಕ ಸೇರಿಕೊಂಡು ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ ವಿಷಮಯವಾಗಿದೆ. ಈಗ ನೀರಿನ ಪಿಒಡಿ ಮತ್ತು ಡಿಒ ಲೆವೆಲ್ ಕಡಿಮೆಯಾಗಿದ್ದು, ಡಿಒ ಲೆವೆಲ್ 3.5ಕ್ಕಿಂತ ಕೆಳಮಟ್ಟದಲ್ಲಿರುವುದರಿಂದ ಮೀನುಗಳು ಸಾಯುತ್ತಿದೆ ಎಂದರು.
ಈಗಾಗಲೇ ನಮ್ಮ ಇಲಾಖೆ ನಡೆಸಿದ ಪರಿಶೀಲನೆ ಪ್ರಕಾರ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ಕಂಪನಿ, ಕೆಂಜಾರುವಿನಲ್ಲಿರು ಕೆಲವು ಕೈಗಾರಿಗಳು ಮತ್ತು ಹಾಲಿನ ಘಟಕವೊಂದರಿಂದ ಕೆಲವು ರಾಸಾಯನಿಕ ನದಿ ಸೇರುತ್ತಿದೆ. ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಿ ವರದಿ ನೀಡಲಾಗುವುದು ಎಂದರು.
ಈ ಸಂದರ್ಭ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್, ಕೈಗಾರಿಕೆಗಳ ಮುಖ್ಯಸ್ಥರು, ಮರವೂರು ಗ್ರಾಮಸ್ಥರು ಉಪಸ್ಥಿತರಿದ್ದರು.