ಮಲ್ಪೆಯಲ್ಲಿ ಮಹಿಳೆಯ ಮೇಲೆ ಅಮಾನುಷ ಹಲ್ಲೆ ಖಂಡನೀಯ – ವೆರೋನಿಕಾ ಕರ್ನೆಲಿಯೋ
ಉಡುಪಿ: ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನವೀಯ ವರ್ತನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ನಡೆದಿದ್ದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲೀಯೋ ಖಂಡಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ನಾಲ್ವರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದು ಇದರ ಜೊತೆಗೆ ಒರ್ವ ಮಹಿಳೆಯ ಮೇಲೆ ಅಮಾನುಷ ವರ್ತನೆ ತೋರುತ್ತಿದ್ದಾಗ ಮೂಕ ಪ್ರೇಕ್ಷಕರಂತೆ ವರ್ತಿಸಿದ ಸಾರ್ವಜನಿಕರ ನಡೆ ಕೂಡ ಖಂಡನೀಯವಾಗಿದೆ. ಮಹಿಳೆಯಿಂದ ತಪ್ಪು ನಡೆದಿದ್ದರೂ ಸಹ ಆಕೆಯ ಮೇಲೆ ಹಲ್ಲೆ ನಡೆಸುವ ಬದಲು ಪೊಲೀಸರಿಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಲು ಒತ್ತಾಯ ಮಾಡುವ ಕನಿಷ್ಠ ಸೌಜನ್ಯ ತೋರದಿರುವುದು ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಪ್ರಜ್ಞಾವಂತ ಜನತೆ ತಲೆತಗ್ಗಿಸವ ವರ್ತನೆಗೆ ಸಾಕ್ಷಿಯಾಗಿದೆ.
ನಮ್ಮ ವ್ಯವಸ್ಥೆ ಯಾರಿಗೂ ಯಾವ ಕಾರಣಕ್ಕೂ ಹಲ್ಲೆ ಮಾಡುವ ವಿಚಾರದಲ್ಲಿ ಅನುಮತಿಯನ್ನು ನೀಡುವುದಿಲ್ಲ. ಸರಿ ತಪ್ಪು ಪ್ರಶ್ನಿಸಲು ಪೊಲೀಸ್ ಇಲಾಖೆ ಕಾನೂನು ವ್ಯವಸ್ಥೆ ರಾಜ್ಯ ಹಾಗೂ ದೇಶದಲ್ಲಿ ಇದ್ದು ಶಿಕ್ಷಿತರಾದ ನಮ್ಮ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ. ಘಟನೆಗೆ ಕಾರಣರಾದ ಎಲ್ಲಾ ಆರೋಪಿಗಳ ವಿರುದ್ದ ಪೊಲೀಸರು ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.