ಮಲ್ಪೆ ಕಡಲ ಕಿನಾರೆಯಲ್ಲಿ ಮತ್ಸ್ಯ ಮೇಳಕ್ಕೆ ಹರಿದು ಬಂದ ಜನಸಾಗರ
ಉಡುಪಿ: ಮಲ್ಪೆ ಬೀಚ್ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್, ಮೀನುಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ಭಾನುವಾರ ಬೃಹತ್ ಮತ್ಸ್ಯ ಮೇಳ ‘ಫಿಶ್ ಫೆಸ್ಟ್-2018’ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಿದ್ದು ಸಾವಿರಾರು ಮಂದಿ ಬಗೆಬಗೆಯ ಮೀನು ಖಾದ್ಯಗಳನ್ನು ಸೇವಿಸಿ ಬಾಯಿ ಚಪ್ಪರಿಸಿದರು.
ಮೀನಿನ ತವಾ ಫ್ರೈ, ರವಾ ಫ್ರೈ, ಕರಿ ಇತ್ಯಾದಿ ನಾನಾ ಬಗೆಯ ಮೀನಿನ ಖಾದ್ಯಗಳು ಭಾನುವಾರ ಮಲ್ಪೆ ಮತ್ಸ್ಯ ಮೇಳದಲ್ಲಿ ಬಾಯಲ್ಲಿ ನಿರೂರಿಸಿದವು.
ಫೆಡರೇಶನ್ನ ಐದಾರು ಮಳಿಗೆಯಲ್ಲಿ ಮೀನಿನ ಖಾದ್ಯಗಳು ಜನರನ್ನು ಆಕರ್ಷಿಸಿದವು. ಫ್ರೈ ಆಗುತಿದ್ದ ಮೀನುಗಳು ಜನರ ಬಾಯಲ್ಲಿ ನಿರೂರಿಸುವಂತಿದ್ದವು. ಬಂಗುಡೆ, ಕಾಣೆ, ನಂಗು, ಮೇಲುಗು, ಬೂತಾಯಿ, ಮಾಂಜಿ, ಅಂಜಲ್ ಮೀನಿನ ಬಿಸಿಬಿಸಿಯಾದ ರುಚಿಕರ ರವಾ ಮತ್ತು ತವಾ ಫ್ರೈಗೆ ಪ್ರವಾಸಿಗರು ಫಿದಾ ಆದರು. ಜನ ವಿವಿಧ ಮೀನಿನ ಕರಿ ಮತ್ತು ರುಮಾಲು ರೋಟಿ ಸವಿದರು. ತರಕಾರಿಯಲ್ಲಿ ಸೊಪ್ಪು ಪಲ್ಯ, ದಾಲ್ ಕರಿ ಗಮನ ಸೆಳೆದವು
ಮತ್ಸೃ ಮೇಳದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರಿಗೆ ಕಬಡ್ಡಿ, ತ್ರೋಬಾಲ್, ಪುರುಷರಿಗೆ ವಾಲಿಬಾಲ್, ಕಬಡ್ಡಿ ಆಯೋಜಿಸಲಾಗಿತ್ತು. ಕಬಡ್ಡಿಯಲ್ಲಿ ಮಹಿಳೆಯರ ಎಂಟು ತಂಡ, ಪುರುಷರ 22 ತಂಡ ಭಾಗವಹಿಸಿದ್ದವು. ತ್ರೋನಲ್ಲಿ ಮಹಿಳೆಯರ ಒಂಭತ್ತು, ಕಬಡ್ಡಿಯಲ್ಲಿ ಪುರುಷರ 15 ತಂಡಗಳು ಭಾಗವಹಿಸಿತ್ತು. ವಿವಿಧ ವಯೋಮಾನದವರಿಗೆ ಮಲ್ಪೆ ಕಡಲಿನಲ್ಲಿ ಈಜು ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.
ಮಲ್ಪೆ ಕಡಲ ಕಿನಾರೆಯಲ್ಲಿ ಮರಳು ಶಿಲ್ಪ ರಚನೆ ಆಕರ್ಷಕವಾಗಿತ್ತು. ಮರಳು ಶಿಲ್ಪಾಕಾರರು ಕರಾವಳಿ ಸಂಸ್ಕೃತಿ ಸಂಬಂಧಿಸಿ ಆಕರ್ಷಕ ಶಿಲ್ಪಕಲೆಗಳನ್ನು ರಚಿಸಿದ್ದರು. ಸಾಯಂಕಾಲ ನಡೆದ ಗಾಳಿಪಟ ಉತ್ಸವ ನೋಡುಗರ ಮನ ಸೆಳೆಯಿತು. ವಿವಿಧ ಬಣ್ಣದ ಗಾಳಿಪಟ ಹಾರಿಸುತ್ತ ಮಕ್ಕಳು, ಹಿರಿಯರು ರಂಜಿಸಿದರು. ಹಗ್ಗಜಗ್ಗಾಟ, ಚಿತ್ರ ಬಿಡಿಸುವ ಸ್ಪರ್ಧೆ ಆಕರ್ಷಣೆಯಾಗಿತ್ತು.
ಬೀಚ್ನಲ್ಲಿ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿತ್ತು. 50ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿ ಪ್ರತಿಭೆ ತೋರ್ಪಡಿಸಿದವು. ದೊಡ್ಡ ನಾಯಿಗಳ ಗಾಂಭೀರ್ಯ, ಪಪ್ಪಿ ಶ್ವಾನಗಳ ವಯ್ಯರ ನೋಡುಗರ ಮನಸೂರೆಗೊಳಿಸಿತು. ಭಾರತೀಯ ತಳಿಗಳು ಸೇರಿದಂತೆ ವಿದೇಶಿ ತಳಿಗಳ ಶ್ವಾನಗಳು ಕರಾಮತ್ತು ಪ್ರದರ್ಶಿಸಿದವು.
ವಿವಿಧ ಸ್ಪರ್ಧೆಗಳನ್ನು ಬೆಳಿಗ್ಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ತೆಂಕನಿಡಿಯೂರು ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್, ನಗರಸಭೆ ಸದಸ್ಯರಾದ ಲಕ್ಷ್ಮೀ ಮಂಜುನಾಥ್ ಕೊಳ, ಎಡ್ಲಿನ್ ಕರ್ಕಡ, ಸುಂದರ ಕಲ್ಮಾಡಿ, ವಿಜಯ ಕೊಡವೂರು ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಮಾತನಾಡಿ ಪ್ರಸ್ತುತ ಹಲವು ರೀತಿಯಲ್ಲಿ ಮೀನುಗಾರರು ಸಂಕಷ್ಟದಿಂದ ಬದುಕು ಸಾಗಿಸುವಂತಾಗಿದೆ. ಸರ್ಕಾರದ ವತಿಯಿಂದ ಕೃಷಿಕರಿಗೆ ನೀಡುವ ಸೌಲಭ್ಯ ಹಾಗೂ ಪರಿಹಾರಗಳನ್ನು ಮೀನುಗಾರರಿಗೂ ಕೊಡುವಂತಾಗಬೇಕು. ಕಡಲಿನಲ್ಲಿ ಸಂಕಷ್ಟದಿಂದ ದುಡಿಯುವ ಮೀನುಗಾರರನ್ನು ಸರ್ಕಾರಗಳು ಕಡೆಗಣಿಸಬಾರದು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮೀನುಗಾರಿಕೆ ಹಾಗೂ ಮೀನು ಸೇವನೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯಾದ್ಯಂತ ಮುಂಬರುವ ದಿನಗಳಲ್ಲಿ ಫೆಡರೇಷನ್ ವತಿಯಿಂದ ಮತ್ಸ್ಯ ಕ್ಯಾಂಟೀನ್ ಆರಂಭಿಸಿ ತಾಜಾ ಮೀನಿನ ಖಾದ್ಯಗಳನ್ನು ಮತ್ಸೃ ಪ್ರಿಯರಿಗೆ ಒದಗಿಸುವ ಚಿಂತನೆ ಇದೆ. ಈ ಯೋಜನೆಗೆ ಪೂರ್ವಭಾವಿಯಾಗಿ ಮತ್ಸ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
ಡಾ.ಜಿ.ಶಂಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಆನಂದ ಸಿ.ಕುಂದರ್, ಗುಜರಾತ್ ರಾಜ್ಯ ಸರ್ಕಾರಿ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ವೆಲ್ಜಿಭಾಯಿ ಕೆ.ಮಸಾನಿ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಸುನೀಲ್ ಕುಮಾರ್ , ವಿಧಾನ ಪರಿಷತ್ ಪ್ರತಿಪಕ್ಷ ನಾಟಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮೀನುಗಾರರ ಸಂಘ ಅಧ್ಯಕ್ಷ ಸತೀಶ್ ಕುಂದರ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಅದಾನಿ ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ, ನಗರಸಭೆ ಸದಸ್ಯೆ ಲಕ್ಷ್ಮೀ ಮಂಜುನಾಥ ಕೊಳ, ಉದ್ಯಮಿ ಮನೋಹರ ಶೆಟ್ಟಿ, ರಾಜ್ಯ ಸೌಹಾರ್ದ ಸಂಯುಕ್ತ ಸರ್ಕಾರಿ ನಿಯಮಿತ ಅಧ್ಯಕ್ಷ ಕೃಷ್ಣ ರೆಡ್ಡಿ, ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ದ.ಕ ಜಿಲ್ಲಾ ಮೋಗವೀರ ಮಹಾಸಂಘ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮತ್ಸೊೃೀದ್ಯಮಿ ಸಾಧು ಸಾಲ್ಯಾನ್, ರಾಜ್ಯ ಒಳನಾಡು ಸಹಕಾರಿ ಮೀನುಗಾರಿಕೆ ಸಂಘ ಅಧ್ಯಕ್ಷ ಮಾದೇ ಗೌಡ ಉಪಸ್ಥಿತರಿದ್ದರು.
ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್ಚಂದ್ರ ಶೆಟ್ಟಿ ವಂದಿಸಿದರು.
Pics By Alister Attur