ಮಲ್ಪೆ: ಕರಾವಳಿ ಕಾವಲು ಪಡೆಯ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆದ ದುಷ್ಕರ್ಮಿಗಳು!
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೇಸ್ ಖಾತೆಗಳನ್ನು ಸೃಷ್ಟಿಸಿ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸುವ ಹಣಕ್ಕಾಗಿ ಬೇಡಿಕೆ ಇಡುವ ಪ್ರಕರಣಗಳ ಬೆನ್ನಲ್ಲೆ ಈಗ ಉಡುಪಿಯ ಮಲ್ಪೆಯ ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಕುಮಾರ್ ಆರ್ ಅವರ ಹೆಸರಿನಲ್ಲಿ ಕೂಡ ನಕಲಿ ಖಾತೆಯನ್ನು ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ಎಸ್ಪಿ ಸಿಂಗ್ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದಿದ್ದು, ಅದಕ್ಕೆ ಉಡುಪಿಯ ಕರಾವಳಿ ಕಾವಲು ಪಡೆ ಎಸ್ಪಿ ಚೇತನ್ ಕುಮಾರ್ ಆರ್ ಫೊಟೋ ಬಳಕೆ ಮಾಡಲಾಗಿದೆ. ಖಾತೆ ತೆರೆದ ಅರ್ಧ ಗಂಟೆಯಲ್ಲಿಯೇ ಎಸ್ಪಿ ಚೇತನ್ ಕುಮಾರ್ ಅವರಿಗೆ ಮಾಹಿತಿ ಲಭಿಸಿದ್ದು ಕೂಡಲೇ ಸ್ಥಳೀಯ ಮತ್ತು ಬೆಂಗಳೂರು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ ಅಲ್ಲದೆ ಫೇಸ್ ಬುಕ್ ಗೂ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಆನ್ಲೈನ್ ಖದೀಮರು, ಪರಿಚಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ.