Home Mangalorean News Kannada News ಮಲ್ಪೆ – ಪಡುಕೆರೆ ಸೇತುವೆ ನಿರ್ಮಾಣದ ಕ್ರೆಡಿಟ್ ಪ್ರಮೋದರಿಗೋ ಅಥವಾ ರಘುಪತಿ ಭಟ್ಟರಿಗೋ?

ಮಲ್ಪೆ – ಪಡುಕೆರೆ ಸೇತುವೆ ನಿರ್ಮಾಣದ ಕ್ರೆಡಿಟ್ ಪ್ರಮೋದರಿಗೋ ಅಥವಾ ರಘುಪತಿ ಭಟ್ಟರಿಗೋ?

Spread the love

ಮಲ್ಪೆ – ಪಡುಕೆರೆ ಸೇತುವೆ ನಿರ್ಮಾಣದ ಕ್ರೆಡಿಟ್ ಪ್ರಮೋದರಿಗೋ ಅಥವಾ ರಘುಪತಿ ಭಟ್ಟರಿಗೋ?

ಉಡುಪಿ: ಇಲ್ಲಿನ ಸಮುದ್ರದ ಮಧ್ಯೆ ಇರುವ ಪಡುಕರೆ ಮತ್ತು ಮಲ್ಪೆ ತೀರವನ್ನು ಜೋಡಿಸುವ ಸುಮಾರು 16.50 ಕೋಟಿ ರು. ವೆಚ್ಚದ ನೂತನ ಸೇತುವೆ ಶನಿವಾರ ಉದ್ಘಾಟನೆಗೊಳ್ಳಲಿದೆ.

ಈ ನಡುವೆ ಸೇತುವೆಯ ನಿರ್ಮಾಣದ ಕ್ರೆಡಿಟ್ ಪಡೆಯುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ಕೆಸರೆರೆಚಾಟ ಆರಂಭವಾಗಿದೆ. ಈ ಸೇತುವೆಯನ್ನು ತಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಡುಪಿಯ ಅಂದಿನ ಶಾಸಕ ರಘುಪತಿಭಟ್ ಅವರು ಕ್ಯಾಬಿನೆಟ್ ನಲ್ಲಿ ಮಂಜೂರಾತಿ ಮಾಡಿಸಿ ಶಂಕುಸ್ಥಾಪನೆಯನ್ನು ನಡೆಸಿದ್ದರೆ, ಬದಲಾದ ರಾಜಕೀಯ ಪರಿಸ್ಥಿಯಲ್ಲಿ ಅದಕ್ಕೆ ಬೇಕಾದ ಹಣಕಾಸು ಹೊಂದಿಸುವ ಕೆಲಸವನ್ನು ಈಗಿನ ಶಾಸಕ ಪ್ರಮೋದ್ ಮಧ್ವರಾಜ್ ಮಾಡಿರುವುದು ಮತ್ತು ಉದ್ಘಾಟನೆಗೆ ಕನಿಷ್ಠ ಸೌಜನ್ಯಕ್ಕಾದರೂ ರಘುಪತಿ ಭಟ್ ಅವರಿಗೆ ಅಹ್ವಾನ ನೀಡದೆ ಇರುವುದು ಪರಸ್ಪರ ರಾಜಕೀಯ ಕಚ್ಚಾಟಕ್ಕೆ ದಾರಿ ಮಾಡಿಕೊಟ್ಟಿದೆ.

ದ್ವೀಪ ಪ್ರದೇಶವಾದ ಪಡುಕೆರೆಯಿಂದ ಮಲ್ಪೆಗೆ ಇರುವ ದೂರ ಕೇವಲ 800 ಮೀಟರ್ ಆದರೆ ಮಲ್ಪೆಯಿಂದ ಕಾಪು ಕೈಪುಂಜಾಲು ವರೆಗೆ ಉದ್ದಕ್ಕೆ ಹರಡಿರುವ ದ್ವೀಪ ಪ್ರದೇಶದ ಜನರಿಗೆ ದೋಣಿ ಬಿಟ್ಟರೆ ಹೊರಗೆ ಹೋಗಲು 10 ಕಿಮಿ ದೂರ ದಾರಿಯನ್ನು ಸುತ್ತುವರಿದು ಹೋಗಬೇಕಾದ ಪರಿಸ್ಥಿತಿ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಇಲ್ಲಿ ಜನರು ಪ್ರತಿನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ತೆರಳುವ ಮಂದಿ ನದಿ ದಾಟಲು ದೋಣಿಯನ್ನೇ ಅವಲಂಬಿಸಬೇಕಾಗಿತ್ತು. ತಮ್ಮ ಭಾಗಕ್ಕೆ ಸೇತುವೆಯನ್ನು ಪಡೆಯುವುದಕ್ಕೆ ಈ ಭಾಗದ ಜನ ಸಾಕಷ್ಟು ಹೋರಾಟವನ್ನು ನಡೆಸಿದ್ದರು.

ಹಿಂದಿನ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಅಂದಿನ ಉಡುಪಿ ಶಾಸಕ ರಘುಪತಿ ಭಟ್ ಅವರ ಅವಿರತ ಶ್ರಮದಿಂದ ಸೇತುವೆಯನ್ನು ಮಂಜೂರುಗೊಳಿಸಿ ಟೆಂಡರ್ ಕರೆದು 2013 ರ ಫೆಬ್ರವರಿ 10 ರಂದು ಶಿಲನ್ಯಾಸ ಕೂಡ ನಡೆಸಿದ್ದರು. ಯೋಜನೆಯ ಗುತ್ತಿಗೆಯನ್ನು ಯೋಜಕ ಸಂಸ್ಥೆಗೆ ನೀಡಿದ್ದು, ನಂತರದ ದಿನಗಳಲ್ಲಿ ಚುನಾವಣೆ ಬಂದು ಸರಕಾರ ಬದಲಾಯಿತು. ತಾಂತ್ರಿಕ ಕಾರಣಗಳಿಂದ ಉದ್ದೇಶಿತ ಯೋಜನೆ ಕೊಂಚ ಹಿನ್ನಡೆ ಕಾಣಬೇಕಾಗಿ ಬಂತು. ಮೊದಲಿನ ಸರಕಾರದ ಅವಧಿಯಲ್ಲಿ ರೂ 13.50 ಕೋಟಿ ಮೊತ್ತಕ್ಕೆ ಟೆಂಡರ್ ಆಗಿದ್ದು, ಬಳಿಕ ಸೇತುವೆಯ ಅಗಲ ಮತ್ತು ಎತ್ತರವನ್ನು ವಿಸ್ತರಿಸಲಾಯಿತು. ಸೇತುವೆಯ ವಿನ್ಯಾಸವನ್ನು ಬದಲಾಯಿಸಿದ ಪರಿಣಾಮ ವೆಚ್ಚ ರೂ 16.91 ಕೋಟಿಗೆ ಏರಿತು.

ಈ ನಡುವೆ ಶಾಸಕ ಪ್ರಮೋದ್ ಅವರು ಸ್ಥಳೀಯ ಮೀನುಗಾರರ ಬೇಡಿಕಗೆಯಂತೆ ಸೇತುವೆಯ ಎತ್ತರ, ಅಗಲವನ್ನು ಹೆಚ್ಚಿಸಿ, ಅಗತ್ಯವಾದ ಹೆಚ್ಚುವರಿ ಮೊತ್ತವನ್ನು ಪ್ರಮೋದ್ ಅವರು ಕಾಂಗ್ರೆಸ್ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದಾರೆ.

ಒಟ್ಟಿನಲ್ಲಿ ಸೇತುವೆ 2 ವರ್ಷಗಳಷ್ಟು ತಡವಾಗಿಯಾದರೂ ನಿರ್ಮಾಣಗೊಂಡಿದೆ, ಇಂದು ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಉದ್ಘಾಟನೆಗೊಳ್ಳಲಿದೆ.

  ಆದರೇ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಸೇತುವೆಯ ನಿರ್ಮಾಣಕ್ಕೆ ಬುನಾದಿ ಹಾಕಿದ ಮಾಜಿ ಶಾಸಕ ರಘುಪತಿ ಭಟ್ಟರನ್ನು ಶಿಷ್ಟಚಾರಕ್ಕೂ ಕರೆದಿಲ್ಲ ಎನ್ನುವುದು ಬಿಜೆಪಿಗರ ಕಣ್ಣು ಕೆಂಪಾಗಿಸಿದೆ. ಈ ನಡುವೆ ಸೇತುವೆಯ ಸ್ಥಳದಲ್ಲಿ ರಘುಪತಿ ಭಟ್ಟರನ್ನು ಅಭಿನಂದಿಸುವ ಕೆಲಸವನ್ನು ಬಿಜೆಪಿಗರು ಮಾಡಿದರೆ, ಪ್ರಮೋದ್ ಅವರಿಗೆ ಅಭಿನಂದಿಸುವ ಕೆಲಸವನ್ನು ಕಾಂಗ್ರೆಸಿಗರು ಮಾಡಿರುವುದು ಒಂದು ರೀತಿಯ ವಿವಾದಕ್ಕೆ ಕಾರಣವಾಗಿದೆ. ಇದೇ ವಿಷಯ ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಮುಂದುವರೆದು ಪರಸ್ಪರ ಪರ ವಿರೋಧದ ಹೇಳಿಕೆ ದಾರಿ ಮಾಡಿಕೊಡುವುದಂತೂ ನಿಜ.

ಈ ಕುರಿತು ಮಾಜಿ ಶಾಸಕ ರಘುಪತಿ ಭಟ್ಟರನ್ನ  ಮಾತನಾಡಿಸಿದರೆ ಈ ಸೇತುವೆ ಡಾ.ವಿ.ಎಸ್.ಆಚಾರ್ಯ ಅವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡುವುದಕ್ಕೆ ರೂ. 13.50 ಕೋಟಿ ರು.ಗಳ ವೆಚ್ಚದ ಈ ಸೇತುವೆಯನ್ನು ಜಗದೀಶ್ ಶೆಟ್ಟರ್ ಅವರ ಕ್ಯಾಬಿನೆಟ್ ನಲಲ್ಲಿ ಮಂಜೂರು ಮಾಡಿಸುವುದಕ್ಕೆ ನಾನು ಬಹಳ ಹೋರಾಟವನ್ನೇ ಮಾಡಿದ್ದೇನೆ. ಅಲ್ಲದೆ ಈ ಸೇತುವೆಯ ಮಂಜೂರಾತಿಗೆ ಯಡ್ಯೂರಪ್ಪ ಹಾಗೂ ಸದಾನಂದ ಗೌಡರ ಸಹಕಾರವೂ ಇತ್ತು. ನಿಯಮಾವಳಿಯ ಪ್ರಕಾರ 2015 ಮೇಯಲ್ಲಿ ಸೇತುವೆಯ ಕೆಲಸ ಮುಗಿಯಬೇಕಾಗಿತ್ತು ತಡವಾಗಿಯಾದರೂ ಈಗ ಪಡುಕರೆಯ ಜನರಿಗೆ ಸೇತುವೆಯ ಸೌಲಭ್ಯ ಸಿಕ್ಕಿದೆ. ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ಕರೆದಿಲ್ಲ, ಪರವಾಗಿಲ್ಲ, ಆದರೆ ಸೇತುವೆಯ ಕೆಲಸದಲ್ಲಿ ನಿಜವಾದ ಸತ್ಯ ಏನು, ಸೇತುವೆ ಮಂಜೂರು ಮಾಡಿಸಿದ್ದು ಯಾರೂ ಎನ್ನುವುದು ಪಡುಕರೆಯ ಜನರಿಗೆ ಗೊತ್ತಿದೆ. ಅದಕ್ಕಾಗಿಯೇ ಅಲ್ಲಿನ ಜನರ ನನ್ನ ಪರವಾಗಿ ಅಭಿನಂಧಿಸಿ ಬ್ಯಾನರ್ ಹಾಕಿದ್ದಾರೆ ಅದಕ್ಕಾಗಿ  ಅವರಿಗೆ ನಾನು ಅಭಿನಂದನೆ ಹೇಳುತ್ತೇನೆ ಎನ್ನುತ್ತಾರೆ.

ಆದರೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಕಾರ ಪಡುಕೆರೆ ಜನರ ಬಹುಕಾಲದ ಬಹುಬೇಡಿಕೆಯ ಸೇತುವೆ ಈಗ ಪೂರ್ಣಗೊಂಡಿದೆ. ಹಿಂದಿನ ಬಿಜೆಪಿ ಸರ್ಕಾರ ಇದನ್ನು ಮಂಜೂರು ಮಾಡಿತ್ತು. ಆದರೇ ಅದಕ್ಕೆ ಬೇಕಾದ ಅನುದಾನದ ಪೈಸೆಪೈಸೆಯನ್ನು ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಸರ್ಕಾರದಿಂದ ಏನೂ ಆಗಿರಲಿಲ್ಲ. ಗುತ್ತಿಗೆದಾರರಿಗೆ ಹಣ ನೀಡದೇ ಕಾಮಗಾರಿ ವಿಳಂಭವಾಗಿದೆ ಎಂದು ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದಿಂದಲೇ ಈ ಸೇತುವೆ ನಿರ್ಮಾಣವಾಗಿದೆ. ನಾನೇ ಖುದ್ದು ಅದನ್ನು ಉದ್ಘಾಟಿಸುತ್ತಿದ್ದೇನೆ ಎನ್ನುತ್ತಾರೆ.

 


Spread the love
1 Comment
Inline Feedbacks
View all comments
Truth Seeker
7 years ago

Good report exposing the sad state of politics in our towns. My bigger question is – why should Raghupathi or Pramoda act as if they personally financed and got the bridge built? It is the duty of elected reps to serve people. Unfortunately, we have encouraged a culture where these elected reps are invited to every ‘udghatana samaarambha’ and treated like celebrities. Oh well…

wpDiscuz
Exit mobile version