ಮಲ್ಪೆ ಸೀ ವಾಕ್ ವೇ ಪಾಯಿಂಟ್ ಗೆ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ
ಉಡುಪಿ : ಮಲ್ಪೆ ಕಡಲತೀರದಲ್ಲಿ 53.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಸೀ ವಾಕ್ ವೇ ಪಾಯಿಂಟ್ ಕಾಮಗಾರಿಗೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು , ಮಲ್ಪೆ ಕಡಲತೀರದಲ್ಲಿ ನಿರ್ಮಾಣವಾಗುವ, ಈ ಸೀ ವಾಕ್ ವೇ ಪಾಯಿಂಟ್ ನಿಂದ, ಜನರಿಗೆ ಸಮುದ್ರದ ಮೇಲೆ ನಡೆಯುವ ಅನುಭವ ದೊರೆಯಲಿದೆ, ವಾಕ್ ವೇ ಯಲ್ಲಿ ನಡೆದಾಡುವುದರಿಂದ, ದೈನಂದಿನ ಒತ್ತಡಗಳಿಂದ ಬಳಲುತ್ತಿರುವವವರಿಗೆ ಒತ್ತಡ ನಿವಾರಣೆಯಾಗಲಿದ್ದು, ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಲಿದೆ, ಡಿಸೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಮಲ್ಪೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ , ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ವತಿಯಿಂದ 1.12 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ, ಈಗಾಗಲೇ 17 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಡುಕರೆ ಸೇತುವೆಯಿಂದಾಗಿ , ಶಾಂತಿ ನಗರ ನಗರ ಬೀಚ್ ವರೆಗೆ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಶಾಂತಿ ನಗರ ಬೀಚ್ ಗೆ ರಸ್ತೆಗಳು, ಸೇತುವೆ, ಶೌಚಾಲಯಗಳನ್ನು ನಿರ್ಮಾಣ ಮಾಡಲು 75 ಲಕ್ಷ ರೂ ಬಿಡುಗಡೆಯಾಗಿದೆ, ಯುವ ಸಬಲೀಕರಣ ವತಿಯಿಂದ ಸಾಹಸ ಕ್ರೀಡೆಗಳಿಗೆ ತರಬೇತಿ ನೀಡಲು ಈ ಪ್ರದೇಶದಲ್ಲಿ 2 ಎಕ್ರೆ ಜಮೀನು ಮೀಸಲಿಟ್ಟಿದ್ದು, ಇದನ್ನು ಜೆತ್ನಾ ವತಿಯಿಂದ ಅಭಿವೃದ್ದಿಪಡಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರಾದ, ಗಣೇಶ್ ನೇರ್ಗಿ, ನಾರಾಯಣ ಕುಂದರ್, ವಿಜಯ್ ಕುಂದರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ , ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು. ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.