ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಬಳಿ ವಿದೇಶಿ ಮೀನುಗಾರಿಕೆ ಬೋಟ್ ವಶ: ಮೂವರ ಬಂಧನ

Spread the love

ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಬಳಿ ವಿದೇಶಿ ಮೀನುಗಾರಿಕೆ ಬೋಟ್ ವಶ: ಮೂವರ ಬಂಧನ

ಮಲ್ಪೆ: ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಬಳಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ವಿದೇಶಿ ಬೋಟನ್ನು ಕರಾವಳಿ ಕಾವಲು ಪೊಲೀಸ್(ಸಿಎಸ್ಪಿ) ಹಾಗೂ ಮಂಗಳೂರು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿದ್ದ ಮೂವರು ತಮಿಳುನಾಡು ಮೂಲದ ಮೀನುಗಾರರನ್ನು ಬಂಧಿಸಲಾಗಿದೆ.


ಬಂಧಿತರನ್ನು ಭಾರತೀಯ ಮೂಲದ ತಮಿಳುನಾಡು ನಿವಾಸಿಗಳೆನ್ನಲಾದ ಜೇಮ್ಸ್ ಫ್ರಾಂಕ್ಲಿನ್(50), ರಾಬಿನ್ ಸ್ಟನ್(50), ಡಿರೋಸ್ ಅಲ್ಫೋನ್ಸ್(38) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಫೆ.17ರಂದು ಒಮಾನ್ ದೇಶದ ದುಕಮ್ ಮೀನುಗಾರಿಕಾ ಬಂದರಿನಿಂದ ಹೊರಟ ಈ ಬೋಟ್ ಕಾರವಾರ ಮೂಲಕ ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಕಡೆಗೆ ಬರುತ್ತಿತ್ತು. ಈ ಬಗ್ಗೆ ಮಲ್ಪೆ ಸಿಎಸ್ಪಿ ಠಾಣೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಲ್ಪೆಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಫೆ.23ರಂದು ಸೈಂಟ್ ಮೇರಿಸ್ ದ್ವೀಪದ ಪರಿಸರದಲ್ಲಿ ತಪಾಸಣೆ ನಡೆಸಿ, ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿ ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಬೋಟನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಮೀನುಗಾರಿಕಾ ಬೋಟು ಒಮಾನ್ ದೇಶಕ್ಕೆ ಸೇರಿದ್ದು, ಇದರಲ್ಲಿದ್ದ 3 ಜನರನ್ನು ವಶಕ್ಕೆ ಪಡೆಯಲಾಗಿದೆ. ಈ ಮೀನುಗಾರಿಕಾ ಬೋಟನ್ನು ಇಂಡಿಯನ್ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಕೇಂದ್ರ ಗುಪ್ತಚರ ದಳ, ಕಸ್ಟಮ್ಸ್, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಜಂಟಿ ಪರಿಶೀಲನೆ ನಡೆಸಿದ್ದು, ಇದರಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ದೊರೆತಿರುವುದಿಲ್ಲ ಎಂದು ತಿಳಿದು ಬಂದಿದೆ.

ಭಾರತೀಯ ಸೀಮಾ ಗಡಿಯಲ್ಲಿ ವಿದೇಶಿ ಬೋಟಿನ ಮೂಲಕ ಮೀನುಗಾರಿಕೆ ನಡೆಸಿದ ಬಗ್ಗೆ ಪ್ರಧಾನ ಕೋಸ್ಟ್ ಗಾರ್ಡ್ ಅಧಿಕಾರಿ ಸುಖಿಂದರ್ ಸಿಂಗ್ ಲಿಖಿತ ದೂರು ನೀಡಿದ್ದು, ಅದರಂತೆ ಮಲ್ಪೆ ಕರಾವಳಿ ಕವಾಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಜಂಟಿ ಕಾರ್ಯಾಚರಣೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ ಎಸ್ಪಿ ಮಿಥುನ್ ಎಚ್.ಎನ್., ಇಂಡಿಯನ್ ಕೋಸ್ಟ್ ಗಾರ್ಡ್ ಕಮಾಂಡರ್ ವಿಶಾಲ್ ರಾಣ, ಕರಾವಳಿ ಕಾವಲು ಪೊಲೀಸ್ ಡಿವೈಎಸ್ಪಿ ಟಿ.ಎಸ್.ಸುಲ್ಫಿ, ಸಿಎಸ್ಪಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ, ಪೊಲೀಸ್ ನಿರೀಕ್ಷಕ ಲೋಕೇಶ್, ಸಿಎಸ್ಪಿ ಕೇಂದ್ರ ಕಛೇರಿಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ., ಮಲ್ಪೆ ಸಿ.ಎಸ್.ಪಿ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಶಿವಶಂಕರ್, ಫೆಮೀನಾ, ಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಸಿ.ಎಸ್.ಪಿ., ಕೇಂದ್ರ ಗುಪ್ತಚರ ದಳ ಹಾಗೂ ಕಸ್ಟಮ್ಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments