ಮಳೆಗೆ ತತ್ತರಿಸಿದ ಉಡುಪಿ, ಮನೆಗಳು ಜಲಾವೃತ, ಮುಂದುವರೆದ ರಕ್ಷಣಾ ಕಾರ್ಯ

Spread the love

ಮಳೆಗೆ ತತ್ತರಿಸಿದ ಉಡುಪಿ, ಮನೆಗಳು ಜಲಾವೃತ, ಮುಂದುವರೆದ ರಕ್ಷಣಾ ಕಾರ್ಯ

ಉಡುಪಿ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸೋಮವಾರ ಉಡುಪಿ ನಗರದ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಠಿಯಾಗಿ , ನೂರಾರು ಮನೆಗಳು ಜಲಾವೃತಗೊಂಡಿವು. ಹಲವು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿಯಾಗಿದೆ. ನೆರೆಯಿಂದ ಸಿಲುಕಿರುವ ಹಲವು ಮಂದಿಯನ್ನು ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ನಗರದ ಕೊಡವೂರು, ಕರಂಬಳ್ಳಿ, ಗುಂಡಿಬೈಲು, ಪಾಡಿಗಾರು, ಮಠದಬೆಟ್ಟು, ಕಲ್ಸಂಕ ಬೈಲಕೆರೆ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಮೂಡನಿಡಂಬೂರು, ನಿಟ್ಟೂರು, ಮಲ್ಪೆ, ಮಣಿಪಾಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, 200ಕ್ಕೂ ಅಧಿಕ ಮನೆಗಳು ಜಲ ದಿಗ್ಭಂಧನಕ್ಕೆ ಒಳಗಾಗಿವೆ. ಇದರಿಂದ ಇಡೀ ನಗರದಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗುಂಡಿಬೈಲು, ಬಡಗುಪೇಟೆಯಲ್ಲಿನ ಹಲವು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾಗಿವೆ. ಅದೇ ರೀತಿ ಗುಂಡಿಬೈಲಿನ ಮನೆಗಳ ಒಳಗೂ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಬೈಲಕರೆಯಲ್ಲಿ ಜಲದಿಗ್ಬಂಧನಕ್ಕೆ ಒಳಗಾದ ಒಂದು ಕುಟುಂಬವನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು. ಅದೇ ರೀತಿ ಪಾಡಿಗಾರು ಸಮೀಪ ಪಿಜಿಯಲ್ಲಿ ವಾಸವಾಗಿರುವ ವಿದ್ಯಾರ್ಥಿಗಳನ್ನು ಅಗ್ನಿಶಾಮಕ ದಳದ ಬೋಟಿನಲ್ಲಿ ಕರೆ ತರಲಾಯಿತು. ಈ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪರೀಕ್ಷೆ ಇರುವುದರಿಂದ ಕರೆದುಕೊಂಡು ಬರಲಾಯಿತು.
ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 9 ರಂದು ಮಂಗಳವಾರ ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಎಂಗಳಿಗೆ ರಜೆ ಘೋಷಿಸಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love